ಪಡುಕೆರೆ ಕಡಲ ತೀರಕ್ಕೆ ಬಂದ ಭಾರೀ ಗಾತ್ರದ ತಿಮಿಂಗಿಲ

ಉಡುಪಿ, ಎ.21: ನೋವೆಲ್ ಕೊರೋನ ಸಂಕಟಕ್ಕೆ ಸಿಲುಕಿ ಕರಾವಳಿಯ ಮೀನುಗಾರಿಕಾ ಚಟುವಟಿಕೆಗಳು ಕಳೆದ ಒಂದು ತಿಂಗಳಿನಿಂದ ಸಂಪೂರ್ಣವಾಗಿ ಸ್ತಬ್ಧವಾಗಿರುವ ನಡುವೆಯೇ ಭಾರೀ ಗಾತ್ರದ ತಿಮಿಂಗಿಲ ಮೀನೊಂದು ಪಶ್ಚಿಮ ಕರಾವಳಿ ತೀರಕ್ಕೆ ತೇಲಿಬಂದು ಸತ್ತು ಬಿದ್ದಿದೆ.
ಕಳೆದೊಂದು ತಿಂಗಳಿನಿಂದ ಯಾಂತ್ರೀಕೃತ ಮೀನುಗಾರಿಕೆಯೂ ಸೇರಿದಂತೆ ಕರಾವಳಿಯ ಎಲ್ಲಾ ರೀತಿಯ ಮೀನುಗಾರಿಕಾ ಚಟುವಟಿಕೆಗಳಿಗೆ ಬಲವಂತದ ವಿರಾಮ ಹೇರಿರುವುದರಿಂದ ಸದ್ಯ ಆಳಸ ಮುದ್ರ ಬೋಟ್‌ಗಳು ಕಡಲಿಗೆ ಇಳಿಯುತ್ತಿಲ್ಲ. ಹೀಗಾಗಿ ಯಾಂತ್ರಿಕ ಬೋಟುಗಳ ಗೌಜು ಗದ್ದಲವಿಲ್ಲದೆ ಕಡಲು ಕೂಡ ಶಾಂತವಾಗಿದೆ.
ಈ ಪ್ರಶಾಂತ ಕಡಲಿನಲ್ಲಿ ತೇಲಿಬಂದ ಭಾರೀ ಗಾತ್ರದ ತಿಮಿಂಗಿಲ ಮೀನು ದಡ ಸೇರಿದೆ. ಉಡುಪಿಯ ಕುತ್ಪಾಡಿ ಗ್ರಾಮದ ಪಡುಕೆರೆ ಕಡಲ ತೀರದಲ್ಲಿ ಪತ್ತೆಯಾದ ಮೀನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ತೀರ ಪ್ರದೇಶಕ್ಕೆ ಬಂದ ತಿಮಿಂಗಿಲಕ್ಕೆ ಈಜಲು ನೀರು ಸಾಲದೆ ಸತ್ತಿರಬೇಕು ಎಂದು ಅಂದಾಜಿಸಲಾಗಿದೆ.
ಸುಮಾರು 25 ಅಡಿ ಉದ್ದದ ಈ ಭಾರೀ ಗಾತ್ರದ, ತೂಕದ ಮೀನು ಪಶ್ಚಿಮ ಕರಾವಳಿಯ ತೀರ ಪ್ರದೇಶದಲ್ಲಿ ಕಾಣಬರುವುದು ತೀರಾ ಅಪರೂಪವೆಂದು ಹೇಳಬಹುದು. ತಿನ್ನಲು ಯೋಗ್ಯವಲ್ಲದ ಈ ತಿಮಿಂಗಿಲವನ್ನು, ವಿಲೇವಾರಿ ಮಾಡಲು ಸ್ಥಳೀಯ ಗ್ರಾಪಂ ಹರಸಾಹಸವನ್ನೇ ಪಡಬೇಕಾಯಿತು.ಜೆಸಿಬಿ ತಂದು ಕಡಲ ತೀರ ಪ್ರದೇಶದಲ್ಲಿ ಹೊಂಡ ಮಾಡಿ ಈ ಬೃಹತ್ ಗಾತ್ರದ ತಿಮಿಂಗಿಲ ವನ್ನು ಹೂಳಲಾಯಿತು.










