ಗಂಜಿಮಠ : ಬಿಗ್‌ಬ್ಯಾಗ್ಸ್ ಕಂಪೆನಿಗೆ ಎಸಿ ತಂಡ ಭೇಟಿ ; ಪರಿಶೀಲನೆ
ಮಂಗಳೂರು, ಎ.21: ಲಾಕ್‌ಡೌನ್ ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಗುರುಪುರ ಸಮೀಪದ ಗಂಜಿಮಠದ ಬಿಗ್‌ಬ್ಯಾಗ್ಸ್ ಇಂಟರ್ ನ್ಯಾಶನಲ್ ಕಂಪೆನಿಗೆ ಮಂಗಳವಾರ ಮಂಗಳೂರು ಸಹಾಯಕ ಆಯುಕ್ತ ಮದನ ಮೋಹನ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಲಾಕ್‌ಡೌನ್ ಆದೇಶ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಾರತಮ್ಯದ ನೀತಿ ಹೊಂದಿದೆ. ವಿದೇಶಕ್ಕೆ ರಫ್ತು ಮಾಡುವ ಚೀಲ ತಯಾರಿಕಾ ಕಂಪೆನಿ ಯೊಂದಲ್ಲಿ ಕೆಲಸ ಮಾಡಲು ಸಾವಿರಾರು ಮಂದಿ ಕಾರ್ಮಿಕರಿಗೆ ಅವಕಾಶ ನೀಡುವುದಾದರೆ ಬಡವರಿಗೆ ಮಾತ್ರ ಲಾಕ್‌ಡೌನ್ ಆದೇಶವೇ ಎಂದು ಸ್ಥಳೀಯರು ಪ್ರಶ್ನಿಸಿ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಗಂಜಿಮಠ ಗ್ರಾಪಂಗೆ ದೂರು ನೀಡಿ, ಹೊರ ರಾಜ್ಯಗಳ ಜನರು ಕೆಲಸ ಮಾಡುವ ಈ ಕಂಪೆನಿಯಿಂದ ಪರಿಸರದಲ್ಲಿ ಕೊರೋನ ವೈರಸ್ ರೋಗ ಹಬ್ಬುವ ಸಾಧ್ಯತೆ ಇದೆ ಎಂದು ಭೀತಿ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ದೂರಿನನ್ವಯ ಸೋಮವಾರ ತಹಶೀಲ್ದಾರ್ ನೇತೃತ್ವದ ತಂಡ ಕಂಪೆನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ, ಮಂಗಳವಾರ ಸಹಾಯಕ ಆಯುಕ್ತರ ತಂಡ ಭೇಟಿ ನೀಡಿ ಕೆಲಸ ನಿರ್ವಹಿಸುವ ಸ್ಥಳವನ್ನು ಪರಿಶೀಲಿಸಿದೆ. ಅಲ್ಲದೆ ಈ ಬಗ್ಗೆ ಬುಧವಾರ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಕೇಂದ್ರ ಸರಕಾರ ಎ.15ರಂದು ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯನ್ವಯ ಬಿಗ್‌ಬ್ಯಾಗ್ಸ್ ಕಂಪೆನಿಗೆ ಕೆಲಸ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಸೋಮವಾರ ಸಹಾಯಕ ಆಯುಕ್ತ ಮದನ್ ಮೋಹನ್ ಹೇಳಿದ್ದರೆ, ‘ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಕೆಲಸ ಆರಂಭಿಸಲಾಗಿದೆ’ ಎಂದು ಕಂಪೆನಿ ಮಾಲಕರು ಹೇಳಿಕೊಂಡಿದ್ದರು.
ಮಂಗಳೂರು ಎಸಿ ನೇತೃತ್ವದ ತಂಡದಲ್ಲಿ ತಾಪಂ ಇಒ ಸದಾನಂದ ಸಫಲಿಗ, ಕೋವಿಡ್-19 ಅಧಿಕಾರಿ ಪ್ರದೀಪ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.







