ಫಲಿತಾಂಶಗಳಲ್ಲಿ ವ್ಯತ್ಯಾಸ: ಕೋವಿಡ್-19 ರ್ಯಾಪಿಡ್ ಟೆಸ್ಟಿಂಗ್ ಕಿಟ್‌ಗಳನ್ನು 2 ದಿನ ಬಳಸದಂತೆ ರಾಜ್ಯಗಳಿಗೆ ಸೂಚನೆ

ಹೊಸದಿಲ್ಲಿ, ಎ.21: ಕೋವಿಡ್-19 ರ್ಯಾಪಿಡ್ ಟೆಸ್ಟಿಂಗ್ ಕಿಟ್‌ಗಳಿಂದ ನಡೆಸಲಾಗುವ ಪರೀಕ್ಷೆಗಳಲ್ಲಿ ವ್ಯತ್ಯಾಸಗಳು ಕಂಡು ಬರುತ್ತಿವೆ ಎಂದು ಹಲವಾರು ರಾಜ್ಯಗಳು ದೂರಿಕೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಈ ಕಿಟ್‌ಗಳನ್ನು ಬಳಸದಂತೆ ಅವುಗಳಿಗೆ ಮಂಗಳವಾರ ಸೂಚಿಸಿರುವ ಕೇಂದ್ರವು,ಈ ಪೈಕಿ ಕೆಲವು ಕಿಟ್‌ಗಳ ತಪಾಸಣೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯು ತನ್ನ ತಂಡಗಳನ್ನು ರವಾನಿಸಲಿದೆ ಎಂದು ತಿಳಿಸಿದೆ.
ಶೇ.90ರಷ್ಟು ನಿಖರ ಫಲಿತಾಂಶಗಳನ್ನು ನಿರೀಕ್ಷಿಸಲಾಗಿತ್ತಾದರೂ ಜೈಪುರದ ಸವಾಯ್ ಮಾನಸಿಂಗ್ ಸರಕಾರಿ ಆಸ್ಪತ್ರೆಯಲ್ಲಿ ರ್ಯಾಪಿಡ್ ಟೆಸ್ಟಿಂಗ್ ಕಿಟ್‌ಗಳನ್ನು ಬಳಸಿ ನಡೆಸಲಾದ 168 ಪರೀಕ್ಷೆಗಳ ಪೈಕಿ ಕೇವಲ ಶೇ.5.4 ಪ್ರಕರಣಗಳಲ್ಲಿ ನಿಖರ ಫಲಿತಾಂಶಗಳು ದೊರಕಿವೆ. ಹೀಗಾಗಿ ರಾಜಸ್ಥಾನ ಸರಕಾರವು ಈ ಕಿಟ್‌ಗಳ ಬಳಕೆಯನ್ನು ಮಂಗಳವಾರ ಬೆಳಿಗ್ಗೆಯಿಂದಲೇ ಸ್ಥಗಿತಗೊಳಿಸಿ,ಈ ಬಗ್ಗೆ ಐಸಿಎಂಆರ್‌ಗೆ ಮಾಹಿತಿಯನ್ನು ನೀಡಿತ್ತು.
“ನಾವು ಈ ಬಗ್ಗೆ ಐಸಿಎಂಆರ್‌ಗೆ ಪತ್ರವನ್ನು ಬರೆದಿದ್ದು ಅದರ ಉತ್ತರಕ್ಕಾಗಿ ಕಾಯುತ್ತಿದ್ದೇವೆ” ಎಂದು ತಿಳಿಸಿದ ರಾಜಸ್ಥಾನದ ಆರೋಗ್ಯ ಸಚಿವ ರಘು ಶರ್ಮಾ ಅವರು, ‘ಪಿಸಿಆರ್ ಆಧಾರಿತ ಪರೀಕ್ಷೆಗಳಲ್ಲಿ ಈಗಾಗಲೇ ಪಾಸಿಟಿವ್ ವರದಿಗಳು ಬಂದಿರುವ ರೋಗಿಗಳ ಪರೀಕ್ಷೆಗೂ ಈ ಕಿಟ್‌ಗಳನ್ನು ಬಳಸಲಾಗಿತ್ತು ಮತ್ತು ಈ ಪ್ರಕರಣಗಳಲ್ಲಿಯೂ ನೆಗೆಟಿವ್ ವರದಿಗಳು ಬಂದಿವೆ. ಇದು ಕಿಟ್‌ಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಯನ್ನು ಮೂಡಿಸಿದೆ. ಐಸಿಎಂಆರ್ ನಮ್ಮ ಶಂಕೆಯನ್ನು ದೃಢಪಡಿಸಿದರೆ ಈ ಕಿಟ್‌ಗಳನ್ನು ಮರಳಿಸಲಾಗುವುದು’ ಎಂದರು.
ರಾಜಸ್ಥಾನವು ಜೈಪುರ ಮೊದಲ್ಗೊಂಡು ರಾಜ್ಯದಲ್ಲಿಯ ಹಾಟ್‌ಸ್ಪಾಟ್‌ಗಳಲ್ಲಿ ರ್ಯಾಪಿಡ್ ಟೆಸ್ಟಿಂಗ್ ಕಿಟ್‌ಗಳ ಮೂಲಕ ಪರೀಕ್ಷೆಯನ್ನು ಶುಕ್ರವಾರದಿಂದ ಆರಂಭಿಸಿತ್ತು.
ರಕ್ತದ ಮಾದರಿಗಳನ್ನು ಪರೀಕ್ಷೆಗೊಳಪಡಿಸುವ ರ್ಯಾಪಿಡ್ ಟೆಸ್ಟಿಂಗ್ ಕಿಟ್‌ಗಳು ಶಂಕಿತ ಕೊರೋನ ವೈರಸ್ ರೋಗಿಗಳ ತಪಾಸಣೆ ಮತ್ತು ರೋಗನಿರ್ಣಯವನ್ನು ತ್ವರಿತಗೊಳಿಸುವ ಉದ್ದೇಶವನ್ನು ಹೊಂದಿವೆ. ಆದರೆ ಇದು ರೋಗವನ್ನು ದೃಢಪಡಿಸುವ ಪರೀಕ್ಷೆಯಲ್ಲ ಮತ್ತು ಪಾಸಿಟಿವ್ ಫಲಿತಾಂಶದ ದೃಢೀಕರಣಕ್ಕಾಗಿ ಪಿಸಿಆರ್ ಆಧಾರಿತ ಪರೀಕ್ಷೆಯು ಅಗತ್ಯವಾಗಿದೆ.







