ವೀಡಿಯೊ ವೈರಲ್ ಮಾಡಿ ದಲಿತ ಮಹಿಳೆಯ ಅವಮಾನಿಸಿದ ಆರೋಪ: ಪತ್ರಕರ್ತನ ವಿರುದ್ಧ ದೂರು ದಾಖಲು
ಹಾಸನ, ಎ.21: ದಲಿತ ಮಹಿಳೆಯೊಬ್ಬರನ್ನು ವೀಡಿಯೊ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಎರಡು ತಿಂಗಳ ಹಿಂದೆ ಹರಿಬಿಟ್ಟಿದ್ದ ಆರೋಪದಡಿ ಪತ್ರಿಕೆಯೊಂದರ ಜಿಲ್ಲಾ ವರದಿಗಾರನ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ಸಕಲೇಶಪುರದ ಬಾಳ್ಳುಪೇಟೆ ನಿವಾಸಿ ಪ್ರದೀಪ್ ಕುಮಾರ್ ಆರೋಪಿ. ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ತನ್ನ ತಾಯಿಯ ಮನೆ ಹಿದುವನಹಳ್ಳಿಗೆ ಫೆ.16ರಂದು ಟೆಂಪೋದಲ್ಲಿ ತೆರಳಿದ್ದಾರೆ. ಟೆಂಪೋ ಇಳಿದ ಬಳಿಕ ಆ ಮಹಿಳೆ ಮತ್ತು ಕಂಡಕ್ಟರ್ ನಡುವೆ ಯಾವುದೋ ವಿಷಯಕ್ಕೆ ವಾಗ್ವಾದ ನಡೆದಿದೆ. ಈ ವೇಳೆ ಮೊಬೈಲ್ ನಿಂದ ವೀಡಿಯೊ ಚಿತ್ರಿಕರಣ ಮಾಡಿಕೊಂಡಿರುವ ಆರೋಪಿ ಅದನ್ನು ಎಡಿಟಿಂಗ್ ಮಾಡಿ ‘ನಂಜುಂಡಿ ಕಲ್ಯಾಣ’ ಚಿತ್ರದ ಹಾಡೊಂದನ್ನು ಸೇರಿಸಿ, ಮಹಿಳೆ ಮದ್ಯಪಾನ ಮಾಡಿರುವಂತೆ ಬಿಂಬಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.
‘ಪ್ರದೀಪ ನನ್ನ ಪಕ್ಕದ ಗ್ರಾಮದವನಾಗಿದ್ದು, ನನ್ನ ಪರಿಚಯಸ್ಥನಾಗಿದ್ದಾನೆ. ನನ್ನ ಜಾತಿಯನ್ನು ಅವಮಾನಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹರಿಬಿಟ್ಟಿದ್ದಾನೆ. ಅಲ್ಲದೆ, ಮರುದಿನ ಹಾಲು ಕೊಳ್ಳಲು ಹೋದಾಗ ನನ್ನ ಜಾತಿಯ ಹೆಸರಿನಿಂದ ಅವಮಾನಿಸಿದ್ದಲ್ಲದೆ, ‘ನಿನ್ನ ವೀಡಿಯೊ ಎಲ್ಲ ಕಡೆ ಹೋಗಿದೆ. ಏನು ಮಾಡಲು ಆಯಿತು’ ಎಂದು ಹಂಗಿಸಿದ್ದಾನೆ. ಇದರಿಂದ ನನ್ನ ಜಾತಿ ನಿಂದನೆ, ಮಾನಹಾನಿಯಾಗಿದೆ’ ಎಂದು ಸಂತ್ರಸ್ತೆ ತಿಳಿಸಿದ್ದಾರೆ.





