ಅ್ಯಂಬುಲೆನ್ಸ್ ವಶಪಡಿಸಿ ಸುಳ್ಳು ಪ್ರಕರಣ ದಾಖಲು ಆರೋಪ: ಎಸ್‍ಪಿಗೆ ದೂರು
ಪುತ್ತೂರು: ಸಾರ್ವಜನಿಕರಿಗೆ ಉಚಿತವಾಗಿ ಸೇವೆಗೆ ಬಳಸುತ್ತಿದ್ದ ಅ್ಯಂಬುಲೆನ್ಸ್ ವಾಹನವನ್ನು ಪುತ್ತೂರು ನಗರ ಠಾಣಾ ಪೊಲೀಸರು ವಶಪಡಿಸಿಕೊಂಡು ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದು, ಈ ಪ್ರಕರಣವನ್ನು ವಜಾಗೊಳಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಇಂದಿರಾನಗರ ಎಂಬಲ್ಲಿನ ನಿವಾಸಿ ಮಹಮ್ಮದ್ ಜುನೈದ್ ಪಿ.ಕೆ ಎಂಬವರು ದ.ಕ.ಜಿಲ್ಲಾ ಎಸ್‍ಪಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಎ.12ರಂದು ರಾತ್ರಿ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮಾನಸಿಕ ಅಸ್ವಸ್ಥನೋರ್ವ ಮೈಸೂರಿನಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದು ಅಲ್ಲಿ ಆತ ಸಂಬಂಧಿಕರಿಗೆ ತೊಂದರೆ ನೀಡುವ ಭಯ, ಆತಂಕದಿಂದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಶೀದ್ ಅಮ್ಚಿನಡ್ಕ ಎಂಬವರು ನನಗೆ ಕರೆ ಮಾಡಿ ಆತನನ್ನು ಕರೆತಂದು ಮಂಗಳೂರು ಅಥವಾ ಪುತ್ತೂರು ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿ ವೈದ್ಯರ ಸಲಹೆಯಂತೆ ಆತನ ಮನೆಯವರು ಸಂಪ್ಯ ಠಾಣೆಗೆ ತೆರಳಿ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಸಂಪ್ಯ ಠಾಣಾ ಉಪ ನಿರೀಕ್ಷಕರು ವೈದ್ಯಕೀಯ ತುರ್ತು ಸೇವೆಯ ಕಾರಣ ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ಹೇಳಿ ಅ್ಯಂಬುಲೆನ್ಸ್ ಮೂಲಕ ಕರೆತಲು ಸೂಚಿಸಿ ಅವರ ದೂರವಾಣಿ ಸಂಖ್ಯೆ ನೀಡಿ ಕಳಿಸಿದ್ದರು.
ಆತನ ಮನೆಯವರು ನಮ್ಮ ಅ್ಯಂಬುಲೆನ್ಸ್ ಸಂಪರ್ಕಿಸಿದ್ದು, ಚಾಲಕ ಸಲೀಮುದ್ದೀನ್ ಇಲ್ಯಾಸ್, ತಾನು ಹಾಗೂ ಆತನ ಮನೆಯ ನಾಲ್ವರು ಸೇರಿದಂತೆ 7 ಮಂದಿ ಎ.12ರಂದು ರಾತ್ರಿ ಪುತ್ತೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ಕೊಡಗು ಜಿಲ್ಲೆಯ ಕುಶಾಲನಗರ(ಕೊಪ್ಪ) ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಡೆದು ನಿಲ್ಲಿಸಿ ಅನುಮತಿ ನಿರಾಕರಿಸಿ ಅ್ಯಂಬುಲೆನ್ಸ್ ದಾಖಲೆಗಳನ್ನು ಪಡೆದು ನಮ್ಮನ್ನು ಪುತ್ತೂರಿಗೆ ಹಿಂದಿರುಗುವಂತೆ ತಿಳಿಸಿದರು. ಅದರಂತೆ ನಾವು ಪುತ್ತೂರಿಗೆ ಮರಳಿದ್ದು ಠಾಣೆಗೆ ತೆರಳಿ ಖಚಿತ ಪಡಿಸಿ ನಮ್ಮ ಮನೆಗಳಿಗೆ ಸೇರಿಕೊಂಡಿದ್ದೆವು.
ಎ.17ರಂದು ಸಂಜೆ ಪುತ್ತೂರು ನಗರ ಠಾಣಾ ಪೊಲೀಸರು ಕರೆ ಮಾಡಿ ಅ್ಯಂಬುಲೆನ್ಸ್ ಠಾಣೆಗೆ ತರಲು ತಿಳಿಸಿ ಅದನ್ನು ವಶಪಡಿಸಿಕೊಂಡು ನಮ್ಮ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸೇವೆಗೆಂದು ಬಳಸುವ ಅ್ಯಂಬುಲೆನ್ಸ್ ವಶಪಡಿಸಿಕೊಂಡಿರುವುದರಿಂದ ಸೇವೆಗೆ ಅಡ್ಡಿಯುಂಟಾಗಿದೆ. ನಮ್ಮ ವಾಹನವನ್ನು ನಮಗೆ ಒಪ್ಪಿಸಿ ಸಾರ್ವಜನಿಕ ಸೇವೆಗೆ ಅವಕಾಶ ನೀಡುವುದರೊಂದಿಗೆ ನಮ್ಮ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ವಜಾಗೊಳಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಜುನೈದ್ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ







