ಜಮಾಅತೆ ಇಸ್ಲಾಮೀ ಹಿಂದ್ ನ ಮಾನವೀಯ ಕಳಕಳಿ ಎಲ್ಲರಿಗೂ ಮಾದರಿಯಾಗಲಿ-ರಾಧಕೃಷ್ಣ ಭಟ್

ಭಟ್ಕಳ : ಯಾರೂ ಕೇಳರಿಯದ ಕಾಲಘಟ್ಟದಲ್ಲಿ ನಾವಿದ್ದೇವೆ. ಇಲ್ಲಿ ಇದ್ದವರೂ, ಇಲ್ಲದವರು ಎಲ್ಲರು ಸಮಾನರಾಗಿದ್ದು ಕೆಲ ಮಾನವೀಯ ಸಹೃದಯಿಗಳು ಈ ಸಂಕಷ್ಟದ ಸಮಯದಲ್ಲಿ ಮುಂದೆ ಬಂದು ಜನರ ಸಂಕಷ್ಟ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಜಮಾಅತೆ ಇಸ್ಲಾಮಿ ಹಿಂದ್ ಈ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಸಿಕೊಂಡಿದ್ದು ಹಳ್ಳಿ ಹಳ್ಳಿಗೆ ಹೋಗಿ ಯಾರಿಂದಲೂ ಸಹಾಯ ಸಹಕಾರ ತಲುದವರಿಗೆ ಸಹಾಯ ಮಾಡುತ್ತಿದೆ ಇವರ ಮಾನವೀಯ ಕಳಕಳಿ ಎಲ್ಲರಿಗೂ ಮಾದರಿಯಾಗಲಿ ಎಂದು ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಹೇಳಿದರು.
ಅವರು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ವೆಂಕಟಾಪುರ ಗ್ರಾಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಎಚ್.ಆರ್.ಎಸ್. ವತಿಯಿಂದ ಅರ್ಹರಿಗೆ ದಿನಸಿ ಹಾಗೂ ತರಕಾರಿಯ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಸಮಾಜಸೇವಾ ಘಟಕದ ಮೌಲಾನಾ ಎಸ್.ಎಂ.ಸೈಯ್ಯದ್ ಝುಬೇರ್ ಮಾರ್ಕೇಟ್, ನಾವೆಲ್ಲರೂ ಒಂದೇ ದೇವನ ಸೃಷ್ಟಿಗಳು, ಒಬ್ಬರು ಸಂಕಷ್ಟದಲ್ಲಿರುವಾಗ ಮತ್ತೊಬ್ಬರು ಸಹಾಯ ಮಾಡುವುದು ಮಾನವ ಧರ್ಮವಾಗಿದ್ದು ದೇಶದೆಲ್ಲೆಡೆ ಕೋವಿಡ್-19ರಿಂದಾಗಿ ಲಾಕ್ ಡೌನ್ ಆಗಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಬಡವ ಬಲ್ಲಿದ ಎನ್ನುವ ಬೇಧಬಾವ ಕೂಡಾ ಇಲ್ಲದೇ ಎಲ್ಲರಿಗೂ ತೊಂದರೆಯಾಗಿದೆ. ಈ ಭಾಗದ ಜನರು ಕೂಡಾ ಸಂಕಷ್ಟದಲ್ಲಿದ್ದು ಅವರ ಸಹಾಯಕ್ಕೆ ನಾವಿದ್ದೇವೆ ಎನ್ನುವುದನ್ನು ತಿಳಿಸಲು ಇಲ್ಲಿಗೆ ಬಂದಿದ್ದೇವೆ. ಎಲ್ಲರೂ ಕೂಡಾ ಕೋವಿಡ್-19ರ ನಿಯಮ ಪಾಲಿಸಿ, ಮನೆಯಲ್ಲಿಯೇ ಸುರಕ್ಷಿತ ವಾಗಿರಿ, ಯಾವುದೇ ಕಾರಣಕ್ಕೂ ಹೊರಗಡೆ ಬಂದು ಸಂಕಷ್ಟಕ್ಕೆ ಸಿಲುಕದಿರಿ ಎನ್ನುವ ಕಿವಿ ಮಾತು ಹೇಳಿದರು.
ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಸಮಿತಿ ಸದಸ್ಯ ಎಂ. ಆರ್. ಮಾನ್ವಿ ಮಾತನಾಡಿ, ಜಮಾಅತೆ ಇಸ್ಲಾಮಿ ಹಿಂದ್ ಕಳೆದ ಹಲವಾರು ವರ್ಷಗಳಿಂದ ಸಮಾಜದಲ್ಲಿ ಸೌಹಾರ್ದ ವಾತವರಣ ನಿರ್ಮಿಸಲು, ಸಮಾಜದಲ್ಲಿ ಸಂಕಷ್ಟಕ್ಕೀಡಾದವರಿಗೆ ನೆರವಾಗಲು ಹಲವಾರು ಕಾರ್ಯಕ್ರಮ ಗಳನ್ನು ಆಯೋಜಿಸುತ್ತ ಬಂದಿದ್ದು ನೆರೆ ಹಾವಳಿ ಸಂಭವಿಸಿದಾಗಲೂ ಜಿಲ್ಲೆಯ ಜನರ ಹಸಿವನ್ನು ನೀಗಿಸುವ ಪ್ರಯತ್ನ ಮಾಡಿದೆ. ಈ ಕೊರೋನಾ ದಿಂದಾಗಿ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಕೆಲವಾರು ದಿನಗಳಿಗಾದರೂ ಆಹಾರದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಅದು ಭಟ್ಕಳ ತಾಲೂಕಿನ ಮರಂಬಳ್ಳಿ, ಕಡಸಲಗದ್ದೆ, ಚೌತನಿ, ಮುಂಡಳ್ಳಿ ಹಾಗೂ ವೆಂಕಟಾಪುರ ಭಾಗದಲ್ಲಿ ಜೀವನಾಶವ್ಯಕ ವಸ್ತುಗಳನ್ನು ನೀಡುತ್ತಿದೆ ಇದೊಂದು ಮಹತ್ಕಾರ್ಯವಾಗಿದೆ ಎಂದು ಪ್ರಶಂಶಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಜಾಲಿ ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ರಹೀಂ, ಜಾಲಿ ಪಟ್ಟಣ ಪಂಚಾಯತ್ ಸದಸ್ಯ ಮಂಗಳ ಗೊಂಡ, ಎಚ್.ಆರ್.ಎಸ್.ನ ಖಮರುದ್ದೀನ್ ಮುಷಾಯಿಕ್, ಅನಂ ಆಲಾ ಎಂ.ಟಿ, ಉಝೈರ್ ಎಸ್.ಎಂ ಮುಂತಾದವರು ಉಪಸ್ಥಿತರಿದ್ದರು.










