ನೇರ ಪ್ರಸಾರದ ನಡುವೆಯೇ ‘ಎಡಿಟರ್ಸ್ ಗಿಲ್ಡ್’ ತೊರೆದ ಅರ್ನಬ್ ಗೋಸ್ವಾಮಿ
ಹೊಸದಿಲ್ಲಿ, ಎ.21: ರಿಪಬ್ಲಿಕ್ ಟಿವಿಯ ಸ್ಥಾಪಕ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಗುಂಪಿನಿಂದ ಮೂವರ ಹತ್ಯೆ ಘಟನೆ ಬಗ್ಗೆ ‘ಉದಾರವಾದಿಗಳ ಮೌನದ’ ಕುರಿತು ಚರ್ಚೆಯ ನಡುವೆಯೇ ‘ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ಕ್ಕೆ ತನ್ನ ರಾಜೀನಾಮೆಯನ್ನು ಘೋಷಿಸಿದ್ದಾರೆ.
ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿನ ಈ ಸಂದರ್ಭದಲ್ಲಿ ಸುಳ್ಳು ಸುದ್ದಿಗಳ ಹರಡುವಿಕೆಯ ವಿರುದ್ಧ ಚಕಾರವೆತ್ತದ್ದಕ್ಕಾಗಿ ಗಿಲ್ಡ್‌ನ ಅಧ್ಯಕ್ಷ, ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ವಿರುದ್ಧ ಗೋಸ್ವಾಮಿ ತೀವ್ರ ದಾಳಿಯನ್ನು ನಡೆಸಿದರು.
“ಶೇಖರ್ ಗುಪ್ತಾ ಅವರೇ, ಕಿವಿಗೊಟ್ಟು ಕೇಳಿ.ಗಿಲ್ಡ್‌ಗೆ ಇದ್ದ ಅಲ್ಪಸ್ವಲ್ಪ ವಿಶ್ವಾಸಾರ್ಹತೆಯನ್ನು ಅದು ಸರಣಿ ಸುಳ್ಳು ಸುದ್ದಿಗಳ ಕುರಿತು ತನ್ನ ದಿವ್ಯಮೌನದಿಂದಾಗಿ ಹಾಳುಗೆಡವಿದೆ. ಗಿಲ್ಡ್ ಅತ್ಯಂತ ಸ್ವಾರ್ಥಿ ಸಂಸ್ಥೆಯಾಗಿದೆ” ಎಂದು ಗೋಸ್ವಾಮಿ ಹೇಳಿದರು. ಬಳಿಕ ಚರ್ಚೆಗೆ ಒಂದು ಕ್ಷಣ ವಿರಾಮ ನೀಡುವಂತೆ ಅದರಲ್ಲಿ ಭಾಗವಹಿಸಿದ್ದ ಪ್ಯಾನೆಲಿಸ್ಟ್‌ಗಳನ್ನು ಕೋರಿಕೊಂಡ ಗೋಸ್ವಾಮಿ ಗಿಲ್ಡ್‌ಗೆ ತನ್ನ ರಾಜೀನಾಮೆಯನ್ನು ಘೋಷಿಸಿದರು.