ಕ್ಯಾನ್ಸರ್ ಚಿಕಿತ್ಸೆಗೆ ಏರ್ ಆ್ಯಂಬುಲೆನ್ಸ್ ಮೂಲಕ ದಿಲ್ಲಿಗೆ ಬರಲಿದ್ದಾರೆ ಬಾಕ್ಸರ್ ಡಿಂಕೊ ಸಿಂಗ್

ಹೊಸದಿಲ್ಲಿ, ಎ.21: ಕೊರೋನ ವೈರಸ್‌ನಿಂದಾಗಿ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಅನಿವಾರ್ಯವಾಗಿ ನಿಗದಿತ ವಿಕಿರಣ ಥೆರಪಿಯನ್ನು ತಪ್ಪಿಸಿಕೊಂಡಿದ್ದ ಏಶ್ಯನ್ ಗೇಮ್ಸ್ ಚಾಂಪಿಯನ್ ಬಾಕ್ಸರ್ ಡಿಂಕೊ ಸಿಂಗ್‌ರನ್ನು ಲಿವರ್ ಕ್ಯಾನ್ಸರ್ ಚಿಕಿತ್ಸೆಗಾಗಿ ಎಪ್ರಿಲ್ 25ರಂದು ಭಾರತದ ಬಾಕ್ಸಿಂಗ್ ಒಕ್ಕೂಟ(ಬಿಎಫ್‌ಐ)ಇಂಫಾಲ್‌ನಿಂದ ದಿಲ್ಲಿಗೆ ಏರ್ ಆ್ಯಂಬುಲೆನ್ಸ್ ಮೂಲಕ ಕರೆ ತರಲಿದೆ.
41ರ ಹರೆಯದ ಸಿಂಗ್ ಪ್ರಸ್ತುತ ಇಂಫಾಲ್‌ನಲ್ಲಿದ್ದು, 15 ದಿನಗಳ ಹಿಂದೆ ವಿಕಿರಣ ಥೆರಪಿಗೆ ಒಳಗಾಗಬೇಕಾಗಿತ್ತು. ಆದರೆ, ಅವರಿಗೆ ಲಾಕ್‌ಡೌನ್‌ನಿಂದಾಗಿ ಇಂಫಾಲ್‌ನಿಂದ ದಿಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ.
‘‘ನಾವು ಸಿಂಗ್ ಅವರ ವಿಕಿರಣ ಥೆರಪಿ ಮುಂದುವರಿಸಲು ಏರ್ ಆ್ಯಂಬುಲೆನ್ಸ್ ಮುಖಾಂತರ ದಿಲ್ಲಿಗೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಿದ್ದೇವೆ’’ ಎಂದು ಬಿಎಫ್‌ಐ ಕಾರ್ಯಕಾರಿ ನಿರ್ದೇಶಕರಾದ ಆರ್.ಕೆ. ಸಚೇಟಿ ತಿಳಿಸಿದ್ದಾರೆ.
ಅರ್ಜುನ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಡಿಂಕೊ ಲಿವರ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಮಣಿಪುರದ ಆಕ್ರಮಣಕಾರಿ ಬಾಟಂವೇಟ್ ಬಾಕ್ಸರ್ ಸಿಂಗ್ 1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.
‘‘ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಅವರಿಗೆ ವಿಕಿರಣ ಥೆರಪಿಯ ಅಗತ್ಯವಿದೆ. ಅದು ಅತ್ಯಂತ ಮುಖ್ಯ. ದಿಲ್ಲಿಯ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿರುವ ಕಾರಣ ಅವರನ್ನು ಇಲ್ಲಿಗೆ ಕರೆತರುವುದು ಉತ್ತಮ’’ ಎಂದು ಸಚೇಟಿ ತಿಳಿಸಿದರು.
ಮಣಿಪುರದಲ್ಲಿ ವಿಕಿರಣ ಥೆರಪಿಯ ವ್ಯವಸ್ಥೆಯ ಕೊರತೆಯಿದೆ. ಗುವಾಹಟಿಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ, ಕ್ರೀಡಾ ಸಚಿವಾಲಯ ಮೂಲಗಳ ಪ್ರಕಾರ ಬಾಕ್ಸರ್ ಸಿಂಗ್ ಅವರು ದಿಲ್ಲಿಯ ಲಿವರ್ ಹಾಗೂ ಬಿಲಿಯರಿವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಮುಂದುವರಿಸಲು ಬಯಸಿದ್ದಾರೆ.







