ಭಾರತ- ಆಸ್ಟ್ರೇಲಿಯ ಟ್ವೆಂಟಿ -20 ವಿಶ್ವಕಪ್ ಆತಿಥ್ಯವನ್ನು ವಿನಿಮಯ ಮಾಡಬಹುದು: ಗವಾಸ್ಕರ್

ಮುಂಬೈ, ಎ.21: ಕೊರೋನ ವೈರಸ್ ಕಾರಣದಿಂದಾಗಿ 2020 ಮತ್ತು 2021ರಲ್ಲಿ ಟ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಯ ಆತಿಥ್ಯವನ್ನು ಭಾರತ ಮತ್ತು ಆಸ್ಟ್ರೇಲಿಯ ವಿನಿಮಯ ಮಾಡಿಕೊಳ್ಳಬಹುದು ಎಂದು ಭಾರತದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಸೋಮವಾರ ಹೇಳಿದ್ದಾರೆ.
‘ಇಂಡಿಯಾ ಟುಡೇ’ ಜೊತೆ ಮಾತನಾಡಿದ ಸುನೀಲ್ ಗವಾಸ್ಕರ್ ಭಾರತದಲ್ಲಿ ಕೋವಿಡ್-19 ನಿಯಂತ್ರಣ ಸಾಧ್ಯವಾದರೆ ಟ್ವೆಂಟಿ-20 ವಿಶ್ವಕಪ್‌ಗೆ ವಾರಗಳ ಮುಂಚೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಸಬಹುದು.
ಬಿಕ್ಕಟ್ಟಿನಿಂದಾಗಿ ಆಸ್ಟ್ರೇಲಿಯ ತನ್ನ ಗಡಿಗಳನ್ನು ಆರು ತಿಂಗಳ ಕಾಲ ಮುಟ್ಟಿದೆ. ಎಂದು ಗಮನಸೆಳೆದರು. ವಿಶೇಷವೆಂದರೆ 2 ಟ್ವೆಂಟಿ-20 ವಿಶ್ವಕಪ್‌ಗಳು ಸತತ ವರ್ಷಗಳಲ್ಲಿ ನಡೆಯಲಿವೆ. ಆಸ್ಟ್ರೇಲಿಯದಲ್ಲಿ 2020 ಮತ್ತು ಭಾರತದಲ್ಲಿ 2021ರಲ್ಲಿ ವಿಶ್ವಕಪ್ ಈಗಾಗಲೇ ನಿಗದಿಯಾಗಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗವು ಜಾಗತಿಕ ಮಟ್ಟದಲ್ಲಿ ಜನ ಜೀವನವನ್ನು ಸ್ಥಗಿತಗೊಳಿಸಿದೆ. ಇತರ ವಿಷಯಗಳ ಪೈಕಿ ಕೊರೋನ ವೈರಸ್ ಕಾರಣದಿಂದಾಗಿ ಕ್ರೀಡೆಗೆ ಹೆಚ್ಚು ಹಾನಿಯಾಗಿದೆ. ಟೋಕಿಯೊ ಒಲಿಂಪಿಕ್ಸ್ ಸೇರಿದಂತೆ ಕೆಲವು ಪ್ರಮುಖ ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ.
ಭಾರತವು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ್ನು ಮೇ 3 ರವರೆಗೆ ವಿಸ್ತರಿಸಿದ ನಂತರ 13ನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯನ್ನು ಮುಂದಿನ ಸೂಚನೆ ನೀಡುವವರೆಗೆ ಮುಂದೂಡಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಐಪಿಎಲ್ ಟೂರ್ನಿಯನ್ನು ಮಾರ್ಚ್ 29 ರಂದು ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಲಾಕ್‌ಡೌನ್ ಕಾರಣದಿಂದಾಗಿ ಅದನ್ನು ಎಪ್ರಿಲ್ 15ರ ವರೆಗೆ ಮುಂದೂಡಲಾಗಿತ್ತು. ಇದು ಬದಲಾದಂತೆ ಆಸ್ಟ್ರೇಲಿಯದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನ ಭವಿಷ್ಯವು ಅನಿಶ್ಚಿತವಾಗಿದೆ.
‘‘ಈ ಸಮಯದಲ್ಲಿ ನಮಗೆಲ್ಲರಿಗೂ ತಿಳಿದಿರುವಂತೆ ಸೆಪ್ಟೆಂಬರ್ 30ರವರೆಗೆ ಆಸ್ಟ್ರೇಲಿಯ ವಿದೇಶಿಯರನ್ನು ದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿದೆ. ಪಂದ್ಯಾವಳಿ ಅಕ್ಟೋಬರ್ ಮಧ್ಯದಿಂದ ಅಥವಾ ಅಕ್ಟೋಬರ್ 3ನೇ ವಾರದಿಂದ ಪ್ರಾರಂಭವಾಗುತ್ತಿದೆ, ಆದ್ದರಿಂದ ಈ ಸಮಯದಲ್ಲಿ ಸ್ವಲ್ಪ ಕಷ್ಟವಾಗುತ್ತಿದೆ ಎಂದು ಹೇಳಿದರು. ಮುಂದಿನ ವರ್ಷದ ಟ್ವೆಂಟಿ-20 ವಿಶ್ವಕಪ್ ಭಾರತದಲ್ಲಿ ನಡೆಯುತ್ತಿದೆ. ಭಾರತದಲ್ಲಿ ಮುಂದಿನ ಅಕ್ಟೋಬರ್ ವೇಳೆಗೆ ಕೋವಿಡ್ -19 ನಿಯಂತ್ರಣಕ್ಕೆ ಬಂದರೆ ಭಾರತ ಮತ್ತು ಆಸ್ಟ್ರೇಲಿಯ ಒಪ್ಪಂದದ ಮೂಲಕ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬಹುದು. ಈ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಬೇಕಿದ್ದ ಟ್ವೆಂಟಿ- 20 ವಿಶ್ವಕಪ್‌ನ್ನು ಭಾರತದಲ್ಲಿ ನಡೆಸಬಹುದು. ಮುಂದಿನ ವರ್ಷ ಭಾರತದಲ್ಲಿ ನಡೆಯಬೇಕಾಗಿರುವ ಟ್ವೆಂಟಿ-20 ವಿಶ್ವಕಪ್‌ನ್ನು ಆಸ್ಟ್ರೇಲಿಯದಲ್ಲಿ ನಡೆಸುವ ಮೂಲಕ ಆತಿಥ್ಯವನ್ನು ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ವಿನಿಮಯ ಮಾಡಿಕೊಳ್ಳಬಹುದು. ಟ್ವೆಂಟಿ-20 ವಿಶ್ವಕಪ್‌ಗೆ ಸ್ವಲ್ಪ ಮುಂಚಿತವಾಗಿಯೇ ಐಪಿಎಲ್ ನಡೆಯಬಹುದು, ಇದರಿಂದಾಗಿ ಆಟಗಾರರಿಗೆ ಟ್ವೆಂಟಿ-20 ವಿಶ್ವಕಪ್ ತಯಾರಿ ನಡೆಸಲು ಸಾಧ್ಯವಾಗುತ್ತದೆ ಎಂದರು.
ಐಸಿಸಿ ಗುರುವಾರ ಟ್ವೆಂಟಿ-20 ವಿಶ್ವಕಪ್ ಭವಿಷ್ಯದ ಬಗ್ಗೆ ಚರ್ಚಿಸಲಿದೆ. ಕೊರೋನ ಸಾಂಕ್ರಾಮಿಕ ರೋಗವು ಕಡಿಮೆಯಾದ ನಂತರ ಟೂರ್ನಿಯನ್ನು ಪುನರಾರಂಭಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಿದೆ ಎಂದು ಆಡಳಿತ ಮಂಡಳಿ ಸೋಮವಾರ ತಿಳಿಸಿದೆ.
ಐಸಿಸಿ ಪುರುಷರ ಟ್ವೆಂಟಿ-20 ವಿಶ್ವಕಪ್ ಸೇರಿದಂತೆ ಐಸಿಸಿ ಟೂರ್ನಿಗಳಿಗೆ ಸಂಬಂಧಿಸಿದಂತೆ, ನಾವು ಆಸ್ಟ್ರೇಲಿಯ ಸರಕಾರ ಸೇರಿದಂತೆ ತಜ್ಞರು ಮತ್ತು ಅಧಿಕಾರಿಗಳಿಂದ ಸಲಹೆ ಪಡೆಯುವುದನ್ನು ಮುಂದುವರಿಸುತ್ತೇವೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನು ಸಾಹ್ನಿ ಹೇಳಿದ್ದಾರೆ.
ಏತನ್ಮಧ್ಯೆ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಏಶ್ಯಕಪ್‌ನ್ನು ಮುಂದೂಡುವ ಬಗ್ಗೆ ಸಂಘಟಕರು ನಿರ್ಧರಿಸಬಹುದು. ಯುನೈಟೆಡ್ ಅರಬ್ ಎಮಿರೇಟ್ ್ಸನಲ್ಲಿ ನಡೆಯಲಿರುವ ಕಾಂಟಿನೆಂಟಲ್ ಟ್ವೆಂಟಿ-20 ಪಂದ್ಯಾವಳಿಯ ಆತಿಥ್ಯವನ್ನು ಪಾಕಿಸ್ತಾನವು ವಹಿಸಿಕೊಂಡಿದೆ.
ಏಶ್ಯಕಪ್‌ನ್ನು ಡಿಸೆಂಬರ್‌ನಲ್ಲಿ ಯುಎಇಯಲ್ಲಿ ನಡೆಸಬಹುದು. ಸೆಪ್ಟಂಬರ್‌ನಲ್ಲಿ ಪಂದ್ಯಾವಳಿ ನಡೆಸುವುದಕ್ಕಿಂತ ಇದು ತುಂಬಾ ಉತ್ತಮ ಸಮಯ. ಆಗ ವಾತಾವರಣ ಅತ್ಯಂತ ಬಿಸಿಯಾಗಿರುತ್ತದೆ ಎಂದು ಗವಾಸ್ಕರ್ ಹೇಳಿದರು.







