ಉಚಿತ ಹಾಲು ವಿತರಣೆ ಎ.30 ರವಗೆ ವಿಸ್ತರಣೆ
ಬೆಂಗಳೂರು, ಎ.21: ಕೋವಿಡ್ 19 ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿರಾಶ್ರಿತರು, ಕೊಳೆಗೇರಿವಾಸಿಗಳು ಮತ್ತು ಕೂಲಿ ಕಾರ್ಮಿಕರ ಕುಟುಂಬಗಳಿಗೆ ಪ್ರತಿ ದಿನ ಒಂದು ಲೀಟರ್ ಹಾಲು ವಿತರಣೆಯನ್ನು ಇದೇ 30 ರವರೆಗೆ ಮುಂದುವರಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮೇ 3 ರವರೆಗೆ ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ. ವಿವಿಧ ಹಾಲು ಒಕ್ಕೂಟಗಳಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲನ್ನು ವಿಲೇವಾರಿ ಮಾಡುವುದು ಕಷ್ಟವಾಗಿರುವುದರಿಂದ ಉಚಿತ ಹಾಲಿನ ವಿಸ್ತರಣೆ ಮುಂದುವರಿಸಲಾಗುವುದು.
ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿದ್ದು, 7.75 ಲಕ್ಷ ಲೀಟರ್‍ಗಳಷ್ಟು ಹಾಲು ಅಧಿಕವಾಗಿ ಸಂಗ್ರಹವಾಗುತ್ತಿದೆ. ಈ ಹಾಲನ್ನು ಅಧಿಸೂಚಿತ ಕೊಳೆಗೇರಿಗಳು, ಅಧಿಸೂಚಿತವಲ್ಲದ ಕೊಳೆಗೇರಿಗಳು, ಕಟ್ಟಡ ಕಾರ್ಮಿಕರ ವಸತಿ ತಾಣಗಳು, ವಲಸೆ ಕಾರ್ಮಿಕರ ವಸತಿ ತಾಣಗಳಲ್ಲಿ ಅರ್ಧ ಲೀಟರ್ ಪ್ಯಾಕೇಟ್‍ಗಳಲ್ಲಿ ವಿತರಿಸಲು ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ.
ರಾಜ್ಯ ಸರಕಾರವೇ ಪ್ರತಿ ದಿನ ಸರಾಸರಿ7.75 ಲಕ್ಷ ಲೀಟರ್ ಹಾಲನ್ನು ಪ್ರತಿ ಲೀಟರ್‍ಗೆ 37 ರಂತೆ ಖರೀದಿಸಿ ವಿತರಿಸಲಿದೆ. ಇದಕ್ಕಾಗಿ 25.81 ಕೋಟಿ ಅನುದಾನ ನೀಡಲು ಮುಖ್ಯಮಂತ್ರಿ ಸಮ್ಮತಿ ನೀಡಿದ್ದಾರೆ.







