ಕೋವಿಡ್-19 ಪರಿಹಾರ ನಿಧಿಗೆ 3.30 ಲಕ್ಷ ರೂ. ಸಂಗ್ರಹಿಸಿದ ಯುವ ಗಾಲ್ಫರ್ ಅರ್ಜುನ್

ಹೊಸದಿಲ್ಲಿ, ಎ.21: 2018ರಲ್ಲಿ ಜೂನಿಯರ್ ಗಾಲ್ಫ್ ವಿಶ್ವ ಚಾಂಪಿಯನ್‌ಶಿಪ್ ಜಯಿಸಿದ್ದಾಗ ಧರಿಸಿದ್ದ ಶೂಗಳನ್ನು ಮಾರಾಟ ಮಾಡಿ ಸಂಗ್ರಹಿಸಿರುವ 3.30 ಲಕ್ಷ ರೂ.ವನ್ನು ಪ್ರಧಾನಮಂತ್ರಿ ಕೇರ್ಸ್ ನಿಧಿಗೆ ದೇಣಿಗೆ ನೀಡಿರುವುದಾಗಿ ಭಾರತದ ಯುವ ಗಾಲ್ಫರ್ ಅರ್ಜುನ್ ಮಂಗಳವಾರ ತಿಳಿಸಿದ್ದಾರೆ.
15ರ ಹರೆಯದ ಅರ್ಜುನ್ ಇತ್ತೀಚೆಗೆ ತಾನು ಗೆದ್ದಿರುವ 102 ಟ್ರೋಫಿಗಳನ್ನು ಹರಾಜಿಗಿಟ್ಟು 4.30 ಲಕ್ಷ ರೂ. ಸಂಗ್ರಹಿಸಿ ದೇಣಿಗೆ ನೀಡಿದ್ದರು. ಈ ಮೂಲಕ ಕೊರೋನ ವಿರುದ್ಧ ಹೋರಾಡುತ್ತಿರುವ ದೇಶಕ್ಕೆ ತನ್ನ ಕೊಡುಗೆ ನೀಡಿದ್ದರು.
‘‘2018ರಲ್ಲಿ ಅಮೆರಿಕದಲ್ಲಿ ನಡೆದಿದ್ದ ಜೂನಿಯರ್ ಗಾಲ್ಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ತಾನು ಪ್ರಶಸ್ತಿ ಜಯಿಸಿದ್ದು, ಈ ವೇಳೆ ಧರಿಸಿರುವ ಹರಿದಿರುವ ಶೂಗಳನ್ನು ನನ್ನ ಚಿಕ್ಕಪ್ಪ ವನೀಶ್ ಪ್ರಧಾನ್‌ಜೀ ಅವರು 3,30,000 ರೂ.ನೀಡಿ ಖರೀದಿಸಿದ್ದಾರೆ. ಈ ಮೊತ್ತವನ್ನು ನಾನು ಪಿಎಂ ಕೇರ್ಸ್‌ಗೆ ನೀಡಿದ್ದೇನೆ. ನಾವು ಬದುಕಲಿ, ಇಲ್ಲದಿರಲಿ ನಮ್ಮ ದೇಶ ಇರಬೇಕು, ಪ್ರತಿಯೊಬ್ಬರೂ ದೇಶವನ್ನು ಉಳಿಸಬೇಕಾಗಿದೆ’’ ಎಂದು ಟ್ವೀಟ್ ಮಾಡಿದ್ದಾರೆ.







