ಜನವಾದಿ ಮಹಿಳಾ ಸಂಘಟನೆಯಿಂದ “ಭಾಷಣ ಸಾಕು-ಊಟ ಕೊಡಿ” ಅಭಿಯಾನ
ಬೆಂಗಳೂರು, ಎ.21: ಎಪಿಎಲ್-ಬಿಪಿಎಲ್ ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಪಡಿತರ ವಿತರಣೆ ಮಾಡಿ, ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಸೌಲಭ್ಯ ನೀಡಿ, ಬಡ್ಡಿ ಮನ್ನಾ ಮಾಡಿ, ಎಲ್ಲರಿಗೂ ಉಚಿತ ಪರೀಕ್ಷೆ ಹಾಗೂ ವೈದ್ಯಕೀಯ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು “ಭಾಷಣ ಸಾಕು-ಊಟ ಕೊಡಿ” ಅಭಿಯಾನವನ್ನು ಮಂಗಳವಾರ ಆರಂಭಿಸಿತ್ತು.
ದುಡಿಯುವ ಮಹಿಳೆಯರಿಗೆ ಕೆಲಸ ಮತ್ತು ವೇತನ ನೀಡಬೇಕು. ವಲಸೆ ಕಾರ್ಮಿಕರಿಗೆ ವಸತಿ, ರೇಷನ್ ಕೊಡಬೇಕು. ನರ್ಸ್, ವೈದ್ಯರು, ಆಶಾ ಕಾರ್ಯಕರ್ತೆ, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಅಂಗನವಾಡಿ ನೌಕರರಿಗೆ ಸುರಕ್ಷಾ ಕ್ರಮ ಕೈಗೊಳ್ಳಬೇಕು, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಅಗತ್ಯ ನೆರವು ನೀಡುವಂತೆ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ದೇವಿ, ಪ್ರಧಾನ ಕಾರ್ಯದರ್ಶಿ ಗೌರಮ್ಮ ಆಗ್ರಹಿಸಿದ್ದಾರೆ.
ದುರ್ಬಲ ಕುಟುಂಬಗಳ ಖಾತೆಗೆ 7500 ರೂ.ನೀಡುವಂತೆ ಒತ್ತಾಯಿಸಿ ಮನೆಯಿಂದಲೆ ಚಳವಳಿಗೆ ರಾಷ್ಟ್ರವ್ಯಾಪಿ ಕರೆಯನ್ನು ನೀಡಲಾಗಿತ್ತು. ನಮ್ಮ ರಾಜ್ಯದಲ್ಲಿ ವಿನೂತನವಾಗಿ ರಂಗೋಲಿ ಬಿಡಿಸುವ ಮೂಲಕ, ಘೋಷಣೆಗಳನ್ನು ಮನೆ ಬಾಗಿಲಿನಲ್ಲಿ ಹಾಕುವ ಮೂಲಕ, ಗ್ಯಾಸ್ ಸಿಲಿಂಡರ್ ಇಟ್ಟು, ನರೇಗಾ ಕೆಲಸ ಮಾಡುವ ಸ್ಥಳದಲ್ಲಿ ಭಿತ್ತಿಪತ್ರಗಳನ್ನು ಹಾಗೂ ಬಾವುಟ ಹಿಡಿದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದರು.





