ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣ: ಸಂಪೂರ್ಣ ಮಾಹಿತಿ ಒದಗಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಎ.21: ಕೊರೋನ ವೈರಸ್ ಹರಡುವಿಕೆ ತಡೆಗೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಹೋದಾಗ ರಾಜ್ಯದ ವೈದ್ಯರು, ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಬೆಂಗಳೂರು ನಗರದ ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣಗಳ ಅರ್ಜಿ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ರಾಜ್ಯ ಸರಕಾರ ರಚಿಸಿರುವ ವೈದ್ಯರ ರಕ್ಷಣಾ ನೀತಿ ಅನುಸಾರವಾಗಿ ಪಾದರಾಯನಪುರದಲ್ಲಿ ವೈದ್ಯರ ಮೇಲಿನ ಹಲ್ಲೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು.
ಕೋವಿಡ್-19 ವಿರುದ್ಧ ಹೋರಾಡಲು ಪೋಲಿಸರು, ವೈದ್ಯರು, ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಅಂಥವರಿಗೆ ಮಾಸ್ಕ್ ಸೇರಿ ಇನ್ನಿತರ ರಕ್ಷಣಾತ್ಮಕ ವಸ್ತುಗಳನ್ನು ವಿತರಿಸದಿದ್ದರೆ ಆರೋಗ್ಯ ದೃಷ್ಟಿಯಿಂದ ಹಲವು ಸಮಸ್ಯೆಗಳಿಗೆ ಸಿಲುಕುತ್ತಾರೆ. ಹೀಗಾಗಿ, ಅವರಿಗೆ ಈ ಕೂಡಲೇ ರಕ್ಷಣಾತ್ಮಕ ವಸ್ತುಗಳನ್ನು ವಿತರಿಸಿ ಎಂದು ಸರಕಾರಕ್ಕೆ ಸೂಚನೆ ನೀಡಿತು.
ನಿಖಿಲ್ ಕುಮಾರಸ್ವಾಮಿ ಮದುವೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‍ಕುಮಾರಸ್ವಾಮಿ ಅವರ ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ನ್ಯಾಯಪೀಠವು, ಮುಂದಿನ ವಿಚಾರಣೆ ವೇಳೆ ಇದರ ಬಗ್ಗೆ ಮಾಹಿತಿ ನೀಡಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಎ.24ಕ್ಕೆ ಮುಂದೂಡಿತು.
ಕೇಂದ್ರ ಸರಕಾರದ ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಸಿದ್ದಲಿಂಗೇಶ್ವರ ದೇವಸ್ಥಾನದ ಜಾತ್ರೆಯನ್ನು ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತ ಮಾಹಿತಿ ನೀಡಲು ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿತು.







