ತೋಟಗಾರಿಕಾ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಸಮಸ್ಯೆ ಎದುರಾಗಿಲ್ಲ: ಸಂಜಯ್
ಚಿಕ್ಕಮಗಳೂರು, ಎ.21: ಜಿಲ್ಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ತೋಟಗಾರಿಕಾ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಸಮಸ್ಯೆ ಎದುರಾಗಿಲ್ಲ. ತೋಟಗಾರಿಕಾ ಉತ್ಪನ್ನಗಳ ಮಾರಾಟ ಸೇರಿದಂತೆ ಕೃಷಿ ಚಟುವಟಿಕೆ ಯಾವುದೇ ಅಡೆತಡೆ ಇಲ್ಲದೇ ನಿರಂತರವಾಗಿ ನಡೆಯುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಸಂಜಯ್ ತಿಳಿಸಿದ್ದಾರೆ.
ಮಂಗಳವಾರ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 1.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲಾಗುತ್ತಿದ್ದು, ಒಟ್ಟಾರೆ 4,87,580 ಮೆಟ್ರಿಕ್ ಟನ್ ತೋಟಗಾರಿಕೆ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದಾಗಿ ಲಾಕ್‍ಡೌನ್ ನಿರ್ಬಂಧಗಳಿದ್ದರೂ ತೋಟಗಾರಿಕಾ ಉತ್ಪನ್ನಗಳ ಸಾಗಣೆ, ಮಾರಾಟ ಸೇರಿದಂತೆ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಹಾಕಿಲ್ಲ. ಪರಿಣಾಮ ಉತ್ಪನ್ನಗಳಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಿಲ್ಲ ಎಂದು ಅವರು ತಿಳಿಸಿದರು.
ಲಾಕ್‍ಡೌನ್ ಸಂದರ್ಭ ಆರಂಭದಲ್ಲಿ ಜಿಲ್ಲೆಯಲ್ಲಿ ರೈತರು ಬೆಳೆದ ಕುಂಬಳಕಾಯಿ ಹಾಗೂ ಕಲ್ಲಂಗಡಿ ಹಣ್ಣುಗಳ ಮಾರಾಟಕ್ಕೆ ಸಮಸ್ಯೆಯಾಗಿತ್ತು. ಆದರೆ ಸರಕಾರ ಕೃಷಿ ಉತ್ಪನ್ನಗಳ ಮಾರಾಟ, ಸಾಗಣೆಗೆ ಅನುಮತಿ ನೀಡಿದ್ದರಿಂದ ಈ ಬೆಳೆಗಳಿಗೆ ಹೊರ ರಾಜ್ಯಗಳಲ್ಲಿ ಮಾರುಕಟ್ಟೆ ಸಿಗುವಂತಾಯಿತು. ಸದ್ಯ ಈ ಉತ್ಪನ್ನಗಳೂ ಸೇರಿದಂತೆ ಎಲ್ಲ ರೀತಿಯ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಸಾಗಣೆ ಹಾಗೂ ಮಾರುಕಟ್ಟೆಯ ಸಮಸ್ಯೆ ಇಲ್ಲ ಎಂದ ಅವರು, ಜಿಲ್ಲೆಯಲ್ಲಿ ಬೆಳೆದ ತೋಟಗಾರಿಕಾ ಉತ್ಪನ್ನಗಳಿಗೆ ನೆರೆಯ ಕೇರಳ, ಮಹಾರಾಷ್ಟ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ದಿಲ್ಲಿಯಿಂದಲೂ ಬೇಡಿಕೆ ಬಂದಿದ್ದು, ಅಗತ್ಯ ವಸ್ತುಗಳ ಸಾಗಣೆ ಮಾಡುವ ವಾಹನಗಳ ಸಂಚಾರಕ್ಕೆ ಸರಕಾರ ಅನುಮತಿ ನೀಡಿರುವುದರಿಂದ ಅಲ್ಲಿನ ವ್ಯಾಪಾರಿಗಳು ಜಿಲ್ಲೆಗೆ ಆಗಮಿಸಿ ಉತ್ಪನ್ನಗಳನ್ನು ಕೊಳ್ಳುತ್ತಿದ್ದಾರೆಂದು ಅವರು ಮಾಹಿತಿ ನೀಡಿದರು.
ಲಾಕ್‍ಡೌನ್ ಸಂದರ್ಭ ತರಕಾರಿ ಹಾಗೂ ಹಣ್ಣು ಹಂಪಲುಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತಾಗಲು ಇಲಾಖೆಯ ಅಂಗಸಂಸ್ಥೆಯಾದ ಹಾಪ್‍ಕಾಮ್ಸ್ ಮೂಲಕ ರೈತರು ಬೆಳೆದ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿಸಿ ಮಾರಾಟ ಮಾಡಲು ಕ್ರಮವಹಿಸಲಾಗಿದೆ. ಅಲ್ಲದೇ ಹಾಪ್‍ಕಾಮ್ಸ್ ವತಿಯಿಂದಲೇ ಸಂಚಾರಿ ಮಳಿಗೆ ತೆರದು ವಾಹನದಲ್ಲಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡಲಾಗುತ್ತಿದೆ. ಸಂಚಾರಿ ಮಳಿಗೆ ಮೂಲಕ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಚಿಕ್ಕಮಗಳೂರು ಮತ್ತು ಶೃಂಗೇರಿಯಲ್ಲಿ ಹಾಪ್‍ಕಾಮ್ಸ್ ಮಳಿಗೆ ತೆರೆಯಲಾಗಿದೆ. ಕೊಪ್ಪದಲ್ಲಿ ಮಳಿಗೆ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಹಣ್ಣು ಮತ್ತು ತರಕಾರಿಗಳನ್ನು ರೈತರಿಂದ ನೆರವಾಗಿ ಖರೀದಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ತರೀಕೆರೆಯಲ್ಲಿ ವೀರಾಂಜನೇಯ ಉತ್ಪಾದಕ ಕಂಪನಿ ಮೂಲಕ 1ಸಾವಿರ ರೈತರು ಪ್ರತಿನಿತ್ಯ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಡೂರಿನಲ್ಲಿ ರೈತ ಉತ್ಪಾದಕ ಸಂಸ್ಥೆ ಮೂಲಕ 10ರಿಂದ 15ಟನ್ ತರಕಾರಿಯನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 58 ಎಕರೆ ಪ್ರದೇಶದಲ್ಲಿ ರೈತರು ಬಗೆ ಬಗೆಯ ಹೂವುಗಳನ್ನು ಬೆಳೆಯಲಾಗುತ್ತಿದೆ. ಆದರೆ ಹೂವಿನ ಬೆಳೆಗಾರರು ಮಾರುಕಟ್ಟೆ ಸಿಗದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ 50ಎಕರೆ ಪ್ರದೇಶದಲ್ಲಿ ಗುಲಾಬಿ, ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಸುಗಂಧರಾಜ, ಚಂಡುಹೂವು ಮತ್ತು ಪಾಲಿಹೌಸ್‍ನಲ್ಲಿ ಗುಲಾಬಿ, ಜರ್ಬೆರ ಮತ್ತು ಆರ್ಕಿಡ್‍ಗಳನ್ನು ಬೆಳಯಲಾಗುತ್ತಿದೆ.
ಮಾರುಕಟ್ಟೆ ಸಮಸ್ಯೆಯಿಂದ ಕೈಗೆ ಬಂದ ತುತ್ತು ಬಾರಿಗೆ ಬರದಂತಾಗಿದೆ. ಹೂವು ಬೆಳೆಗಾರರ ಬೆಳೆದಿರುವ ಹೂವು ನಷ್ಟವಾಗಬಾರದು ಎಂದು ಚಿಂತಿಸಿದ ಬೆಂಗಳೂರಿನ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೂವುಗಳನ್ನು ಎಸೆಯದೇ ಒಣಗಿಸಿಡುವಂತೆ ಸೂಚನೆ ನೀಡಿದೆ. ಹೂವು ಒಣಗಿಸುವುದರಿಂದ ಮುಂದೇ ಉಪಯೋಗಕ್ಕೆ ಬರುತ್ತದೆ ಎಂದು ತಿಳಿಸಿದರು.
ತರೀಕೆರೆ, ಕಡೂರು, ಚಿಕ್ಕಮಗಳೂರು ಭಾಗದಲ್ಲಿ ತರಕಾರಿ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಟೊಮ್ಯಾಟೋ 700 ಹೆಕ್ಟೇರ್, ಆಲೂಗಡ್ಡೆ 3ಸಾವಿರ, ಹಸಿಮೆಣಸಿನಕಾಯಿ 775ಹೆಕ್ಟೇರ್, ಈರುಳ್ಳಿ 6,195 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲು ಗುರಿ ಹೊಂದಲಾಗಿದೆ ಎಂದ ಅವರು, ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರೈತರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಹೆಲ್ಪಲೈನ್ ತೆರೆಯಲಾಗಿದೆ. ಬೆಳಗ್ಗೆ 8ರಿಂದ ಮಧ್ಯಾಹ್ನ 2ಗಂಟೆ ಹಾಗೂ ಮಧ್ಯಾಹ್ನ 2ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಕಾರ್ಯನಿರ್ವಹಿಸುತ್ತಿದೆ. ಎರಡು ಇಲಾಖೆಯ ಇಬ್ಬರು ಅಧಿಕಾರಿಗಳು ಎರಡು ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೆಲ್ಪಲೈನ್‍ಗೆ ಬರುವ ಸಮಸ್ಯೆಗಳನ್ನು ದಾಖಲಿಸಿಕೊಂಡು ಪರಿಹಾರ ಒದಗಿಸುವುದಾಗಿ ತಿಳಿಸಿದರು.
ಮಾವಿನ ಹಣ್ಣು ಇನ್ನೇನು ಕೇಲವೆ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ. ರಾಸಾಯನಿಕ ಬಳಸದೆ ತಾಜಹಣ್ಣನ್ನು ಆಪೇಕ್ಷಿಸುವರಿಗೆ ಅಂಚೆಯ ಮೂಲಕ ಗ್ರಾಹಕರಿಗೆ ಕಳಿಸಿಕೊಡುವ ವ್ಯವಸ್ಥೆ ಬರಲಿದೆ. ಗ್ರಾಹಕರಿಗೆ ಉತ್ತಮ ಮಾವಿನ ಹಣ್ಣುಗಳು ದೊರಕಲಿದೆ ಎಂದು ಇದೇ ವೇಳೆ ಸಂಜಯ್ ತಿಳಿಸಿದರು.
ಬೆಳೆಸಮೀಕ್ಷೆ ನಡೆಸಲು ಅನುಕೂಲವಾಗುವಂತೆ ಆ್ಯಪ್‍ವೊಂದನ್ನು ಸಿದ್ಧಪಡಿಸಲಾಗುತ್ತಿದೆ. ಇದನ್ನು ಶೀಘ್ರ ಸರಕಾರ ಜಾರಿ ಮಾಡಲಿದ್ದು, ಪ್ರತಿಗ್ರಾಮದಲ್ಲಿ ಬೆಳೆಯುವ ಬೆಳೆಗಳ ಮಾಹಿತಿಯನ್ನು ರೈತರು ಪೊಟೊ ತೆಗೆದು ಆಪ್‍ನಲ್ಲಿ ಅಪ್‍ಲೋಡ್ ಮಾಡುವ ವಿಧಾನ ಇದಾಗಿದೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳ ಮಾಹಿತಿಯನ್ನು ನಿಖರವಾಗಿ ಅಂದಾಜಿಸಬಹುದು.
-ಸಂಜಯ್, ತೋಟಗಾರಿಕಾ ಉಪನಿರ್ದೇಶಕ







