ಬಾಗಲಕೋಟೆಯಲ್ಲಿ ಇಬ್ಬರು ಕೋವಿಡ್-19 ಸೋಂಕಿತರು ಗುಣಮುಖ
ಬಾಗಲಕೋಟೆ, ಎ.21: ಜಿಲ್ಲೆಯಲ್ಲಿ ಇಬ್ಬರು ಕೋವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಮೊದಲ ಬಾರಿಗೆ ಕೋವಿಡ್-19 ಸೋಂಕಿತರಾಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದ 75 ವರ್ಷದ ವೃದ್ಧನ 54 ವರ್ಷದ ಪತ್ನಿ(ರೋಗಿ ಸಂಖ್ಯೆ-161) ಹಾಗೂ 58 ವರ್ಷದ ಸಹೋದರನಿಗೆ(ರೋಗಿ ಸಂಖ್ಯೆ-162) ನಂತರ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಇಬ್ಬರನ್ನೂ ಎ.2ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈಗ ಅವರು ಗುಣಮುಖರಾಗಿದ್ದಾರೆ. ಇಬ್ಬರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಎರಡು ಬಾರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ. ಹೀಗಾಗಿ, ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದರು.
ಆಸ್ಪತ್ರೆಯಿಂದ ಮನೆಗೆ ತೆರಳಿರುವ ಇಬ್ಬರೂ ಇನ್ನೂ 15 ದಿನ ಅಲ್ಲಿಯೂ ಕ್ವಾರಂಟೈನ್‍ನಲ್ಲಿ ಇರಲಿದ್ದಾರೆ. ಈ ಅವಧಿಯಲ್ಲೂ ಅವರ ಮೇಲೆ ನಿಗಾ ಇಡಲಾಗುವುದು ಎಂದರು.
ಬಾಗಲಕೋಟೆಯಲ್ಲಿ ಇಲ್ಲಿಯವರೆಗೆ 21 ಮಂದಿ ಸೋಂಕಿತರ ಪೈಕಿ ಒಬ್ಬರು ಮೃತರಾಗಿದ್ದಾರೆ.







