ಕೋವಿಡ್-19: ಭಾರತಕ್ಕೆ ಕಾದಿದೆ ದೊಡ್ಡ ಗಂಡಾಂತರ!

ಹೊಸದಿಲ್ಲಿ, ಎ.22: ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಮೇ ಮಧ್ಯಭಾಗದ ವೇಳೆಗೆ ಗರಿಷ್ಠ ಪ್ರಮಾಣ ತಲುಪಲಿದೆ ಎಂದು ಟೈಮ್ಸ್ ನೆಟ್‌ವರ್ಕ್ ಮತ್ತು ಜಾಗತಿಕ ಸಲಹಾ ಸಂಸ್ಥೆ ಪ್ರೊಟಿವಿಟಿ ನಡೆಸಿದ ಅಧ್ಯಯನದ ವರದಿ ಎಚ್ಚರಿಸಿದೆ. ಬಳಿಕ ಕ್ರಮೇಣ ಈ ಸಂಖ್ಯೆ ಇಳಿಮುಖವಾಗಲಿದೆ ಎಂದು ಅಂದಾಜಿಸಿದೆ.
ಟೈಮ್ಸ್ ಫ್ಯಾಕ್ಟ್ ಇಂಡಿಯಾ ಔಟ್‌ಬ್ರೇಕ್ ರಿಪೋರ್ಟ್ ಮೂರು ವಿಭಿನ್ನ ಸಾಧ್ಯತೆಯನ್ನು ಅಂದಾಜಿಸಿದ್ದು, ಮೇ 22ರ ವೇಳೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 75 ಸಾವಿರದ ಗಡಿ ದಾಟಲಿದೆ. ಕೊರೋನ ವೈರಸ್ ಸೋಂಕು ಏರಿಕೆಯನ್ನು ಅಂದಾಜಿಸಲು ಈ ಅಧ್ಯಯನ ಮೂರು ಮಾಡೆಲ್‌ಗಳನ್ನು ರೂಪಿಸಿದೆ. ವಿಭಿನ್ನ ಸ್ಥಿತಿಯಲ್ಲಿ ಹೇಗೆ ಸಾಂಕ್ರಾಮಿಕ ಅನಾವರಣಗೊಳ್ಳುತ್ತದೆ ಹಾಗೂ ಸರ್ಕಾರ ಮತ್ತು ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ವ್ಯವಸ್ಥೆ ಇದಕ್ಕೆ ಹೇಗೆ ಸ್ಪಂದಿಸುತ್ತದೆ ಎನ್ನುವುದರ ಮೇಲೆ ಅಂದಾಜಿಸಲಾಗಿದೆ.
ಶೇಕಡಾವಾರು ಮಾದರಿಯಲ್ಲಿ ಅಮೆರಿಕ, ಇಟೆಲಿಯಂಥ ದೇಶಗಳಲ್ಲಿ ಹೇಗೆ ಸಾಂಕ್ರಾಮಿಕ ಹರಡಿದೆ ಎನ್ನುವುದರ ಆಧಾರದಲ್ಲಿ ಭಾರತದ ಸಂಖ್ಯೆಯನ್ನು ಅಂದಾಜಿಸಲಾಗಿದೆ. ಟೈಮ್ ಸೀರಿಸ್ ಮಾದರಿಯಲ್ಲಿ ಚೀನಾ ಹಾಗೂ ದಕ್ಷಿಣ ಕೊರಿಯಾದಲ್ಲಿ ವಿವಿಧ ಕಾಲಘಟ್ಟದಲ್ಲಿ ಇದು ಹೇಗೆ ಹೆಚ್ಚಿದೆ ಎಂಬ ಅಂಕಿ ಅಂಶವನ್ನು ಆಧರಿಸಿ ಅಂದಾಜು ಮಾಡಲಾಗಿದೆ. ವೈರಸ್ ಪುನರುತ್ಪತ್ತಿ ದರದ ಆಧಾರದಲ್ಲಿ ಎಸ್‌ಇಐಆರ್ ಮಾದರಿಯಲ್ಲಿ ಅಂದಾಜಿಸಲಾಗಿದ್ದು, ಲಾಕ್‌ಡೌನ್ ಯಾವಾಗ ವಾಪಸ್ ಪಡೆಯುವುದು ಸುರಕ್ಷಿತ ಎಂಬ ಸಲಹೆ ಮಾಡಿದೆ.
ಲಾಕ್‌ಡೌನ್ ಅವಧಿಯನ್ನು ಮೇ 3ರ ನಂತರವೂ ವಿಸ್ತರಿಸಿದರೆ ವೈರಸ್ ಪುನರುತ್ಪತ್ತಿ ದರ 0.8 ಆಗಲಿದೆ. ಅಂದರೆ ಪ್ರತಿ 10 ಸೋಂಕಿತರು 8 ಮಂದಿಗೆ ಹೊಸದಾಗಿ ಸೋಂಕು ಹರಡುತ್ತಾರೆ. ಮೇ 15ರವರೆಗೆ ಲಾಕ್‌ಡೌನ್ ಮುಂದುವರಿಸಿದರೆ ಸೆಪ್ಟೆಂಬರ್ 15ರ ವೇಳೆಗೆ ಸೋಂಕಿತರ ಸಂಖ್ಯೆ ಶೂನ್ಯವನ್ನು ತಲುಪಲಿದೆ. ಮೇ 30ರವರೆಗೆ ವಿಸ್ತರಿಸಿದರೆ ಜೂನ್ ಮಧ್ಯದ ವೇಳೆಗೆ ಪ್ರಕರಣಗಳ ಸಂಖ್ಯೆ ಶೂನ್ಯವನ್ನು ತಲುಪಲಿದೆ ಎಂದು ಅಂದಾಜಿಸಿದೆ.







