ಲಾಕ್‌ಡೌನ್ ಕರ್ತವ್ಯ ನಿಭಾಯಿಸಿದ ಪೊಲೀಸ್ ಅಧಿಕಾರಿಗೆ ಬಸ್ಕಿ ಶಿಕ್ಷೆ!

ಅರಾರಿಯಾ (ಬಿಹಾರ), ಎ.22: ಕೃಷಿ ಅಧಿಕಾರಿಯೊಬ್ಬರು ಪೊಲೀಸ್ ಪೇದೆಗೆ 50 ಬಸ್ಕಿ ಹೊಡೆಯುವಂತೆ ಬಲವಂತಪಡಿಸಿದ ವಿಚಿತ್ರ ಘಟನೆ ವರದಿಯಾಗಿದೆ. ಇಷ್ಟಕ್ಕೂ ಪೊಲೀಸ್ ಪೇದೆ ಮಾಡಿದ ತಪ್ಪೇನು ಗೊತ್ತೇ? ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ವಾಹನ ಚಲಾಯಿಸಲು ಅಗತ್ಯವಿದ್ದ ಪಾಸ್ ತೋರಿಸುವಂತೆ ಅಧಿಕಾರಿಯನ್ನು ಕೇಳಿದ್ದು.
ಲಾಕ್‌ಡೌನ್ ಅನುಷ್ಠಾನ ಹಂತದ ಸಿಬ್ಬಂದಿಗೆ ಯಾವ ರೀತಿಯ ಕಿರುಕುಳ ನೀಡಲಾಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಹಾರ ಪೊಲೀಸ್ ಮಹಾನಿರ್ದೇಶಕ ಗುಪ್ತೇಶ್ವರ ಪಾಂಡೆ, ಘಟನೆ ಬಗ್ಗೆ ತನಿಖಾ ವರದಿ ಸಲ್ಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜೋಕಿಹಾತ್ ಠಾಣೆ ವ್ಯಾಪ್ತಿಯ ಸೂರಜ್‌ಪುರ ಸೇತುವೆ ಬಳಿ ಸೋಮವಾರ ಈ ಘಟನೆ ನಡೆದಿದೆ. ಗಣೇಶ್‌ಲಾಲ್ ತತ್ಮಾ ಎಂಬ ಚೌಕಿದಾರ್ ಜಿಲ್ಲಾ ಕೃಷಿ ಅಧಿಕಾರಿ ಮನೋಜ್ ಕುಮಾರ್ ಎಂಬುವವರ ವಾಹನ ತಡೆದು, ಪಾಸ್ ತೋರಿಸುವಂತೆ ಕೇಳಿದ್ದರು. ಇದರಿಂದ ಕುಪಿತರಾದ ಅಧಿಕಾರಿ ಚೌಕಿದಾರ್‌ನನ್ನು ಬೈದಾಡಿದ್ದಲ್ಲದೇ, ಬಲವಂತವಾಗಿ 50 ಬಾರಿ ಬಸ್ಕಿ ಹೊಡೆಸಿದ್ದಾರೆ.
ಇಷ್ಟು ಮಾತ್ರವಲ್ಲದೇ, ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳಬೇಕಾದ ಜರೂರು ಇಲ್ಲದಿದ್ದರೆ ಜೈಲಿಗೆ ಅಟ್ಟುತ್ತಿದ್ದೆ ಎಂದು ಕೃಷಿ ಅಧಿಕಾರಿ ಅಬ್ಬರಿಸಿದ್ದಾರೆ. ಸ್ಥಳದಲ್ಲೇ ಇದ್ದ ಮತ್ತೊಬ್ಬರು ಪೊಲೀಸ್ ಅಧಿಕಾರಿ ಕೂಡಾ ಚೌಕಿದಾರನನ್ನು ಬೈದು, ಹಿರಿಯ ಅಧಿಕಾರಿಯ ಮುಂದೆ ನನಗೆ ಅವಮಾನ ಮಾಡಿಸಿದೆ ಎಂದು ಹೇಳಿದ್ದಾರೆ.
ಈ ಘಟನೆ ಬಗ್ಗೆ ಐಜಿಪಿ ಹಾಗೂ ಎಸ್ಪಿ ಜತೆ ಮಾತನಾಡಿದ್ದಾಗಿ ಪಾಂಡೆ ಹೇಳಿದ್ದಾರೆ. ಲಾಕ್‌ಡೌನ್ ಜಾರಿಗೊಳಿಸುವ ಕರ್ತವ್ಯದಲ್ಲಿದ್ದ ಚೌಕಿದಾರ್‌ನನ್ನು ಅವಮಾನಿಸಿದ ಅಧಿಕಾರಿಯ ಕ್ರಮವನ್ನು ಅವರು ಆಕ್ಷೇಪಿಸಿದ್ದಾರೆ.







