ಲಾಕ್ ಡೌನ್: ಟ್ಯಾಕ್ಸಿ ವ್ಯವಸ್ಥೆ, ರಕ್ತದಾನ ಮಾಡಿ ಮಹಿಳೆಯ ಹೆರಿಗೆಗೆ ನೆರವಾದ ಕಾನ್ ಸ್ಟೇಬಲ್ ಅಬೂತಾಹಿರ್
“ಬಹುಮಾನವಾಗಿ ಸಿಕ್ಕ ಹಣದಲ್ಲಿ ಅರ್ಧದಷ್ಟು ದಂಪತಿಗೆ ನೀಡುತ್ತೇನೆ”
ಚೆನ್ನೈ: ಶಸ್ತ್ರಕ್ರಿಯೆಗೆ ಒಳಗಾಗಬೇಕಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ತುರ್ತಾಗಿ ರಕ್ತದ ಅಗತ್ಯವಿದ್ದಾಗ ರಕ್ತದಾನ ಮಾಡಿ ಆಕೆ ಯಾವುದೇ ಸಮಸ್ಯೆಯಿಲ್ಲದೆ ಹೆಣ್ಣು ಮಗುವಿಗೆ ಜನ್ಮ ನೀಡುವಂತಾಗಲು ಸಹಾಯ ಮಾಡಿದ ತಿರುಚ್ಚಿಯ ಮನಪ್ಪರೈ ಎಂಬಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ ಸ್ಟೇಬಲ್ ಎಸ್ ಸೈಯದ್ ಅಬೂತಾಹಿರ್ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಸೈಯದ್ ಅವರು ನಗರದ ಕಾಮರಾಜರ್ ಪ್ರತಿಮೆ ಸಮೀಪ ಕರ್ತವ್ಯದಲ್ಲಿದ್ದ ವೇಳೆ ತುಂಬು ಗರ್ಭಿಣಿ ಸುಲೋಚನಾ (25) , ತನ್ನ ಪತಿ ಏಳುಮಲೈ ಹಾಗೂ ಸಂಬಂಧಿಯೊಬ್ಬರ ಜತೆ ನಡೆದುಕೊಂಡು ಹೊಗುತ್ತಿದ್ದುದನ್ನು ಕಂಡು ಅವರನ್ನು ವಿಚಾರಿಸಿದ್ದರು. ಅವರಿಗೆ ಆಸ್ಪತ್ರೆಗೆ ಹೋಗಲು ವಾಹನದ ಅಗತ್ಯವಿದೆಯೆಂದು ತಿಳಿದು ಟ್ಯಾಕ್ಸಿಯ ಏರ್ಪಾಟು ಮಾಡಿದ್ದರು ಸೈಯದ್. ನಂತರ ಸುಲೋಚನಾಗೆ ಸಿಸೇರಿಯನ್ ಗಾಗಿ ತುರ್ತಾಗಿ 0+ ಪಾಸಿಟಿವ್ ಗುಂಪಿನ ರಕ್ತದ ಅವಶ್ಯಕತೆಯಿದೆಯೆಂದು ತಿಳಿದಾಗ ತಮ್ಮ ರಕ್ತದ ಗುಂಪು ಕೂಡ ಅದೇ ಆಗಿರುವುದರಿಂದ ರಕ್ತದಾನ ಮಾಡಲು ಅವರು ಮುಂದೆ ಬಂದರು.
ಹೀಗೆ ರಕ್ತದಾನ ಮಾಡಿ ನಂತರ ಸುಲೋಚನಾ ಮಗುವಿಗೆ ಜನ್ಮ ನೀಡಿದ ತನಕ ಅಲ್ಲಿಯೇ ಇದ್ದು ಹೆಣ್ಣು ಮಗುವನ್ನು ನೋಡಿದ ನಂತರವಷ್ಟೇ ಸೈಯದ್ ಅಲ್ಲಿಂದ ತೆರಳಿದ್ದರು.
ಸುಲೋಚನಾ ಅವರ ಕುಟುಂಬ ಸೈಯದ್ ಅವರ ಸಹಾಯವನ್ನು ಕೊಂಡಾಡಿದೆ. 2017ನೇ ಬ್ಯಾಚಿನ ಗ್ರೇಡ್-2 ಕಾನ್‍ಸ್ಟೇಬಲ್ ಆಗಿರುವ ಸೈಯದ್ ಅವರನ್ನು ಎಸ್‍ಪಿ ಝಿಯಾವುಲ್ ಹಕ್ ಗೌರವಿಸಿದ್ದಾರೆ.
ಅಬೂತಾಹಿರ್ ಅವರಿಗೆ ಎಸ್ಪಿ 1000 ರೂ. ಮತ್ತು ಡಿಜಿಪಿಯವರು 10 ಸಾವಿರ ರೂ.ಗಳನ್ನು ನೀಡಿ ಗೌರವಿಸಿದ್ದಾರೆ.
“ಘಟನೆ ನಡೆದ ಮೇಲೆ, ನಾನು ತಿರುಚ್ಚಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೆ. ದಂಪತಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ನನಗೆ ಸಿಕ್ಕ ಬಹುಮಾನವಾಗಿ ಅರ್ಧದಷ್ಟು ಹಣವನ್ನು ದಂಪತಿಗೆ ನೀಡಲು ಬಯಸಿದ್ದೇನೆ. ಅದು ಅವರ ಖರ್ಚು ವೆಚ್ಚಗಳಿಗೆ ನೆರವಾಗಲಿದೆ” ಎಂದವರು ಹೇಳಿದ್ದಾರೆ.