ಪುತ್ರಿಯನ್ನು ಕೋಟಾದಿಂದ ವಾಪಸ್ ಕರೆತರಲು ಬಿಜೆಪಿ ಶಾಸಕನಿಗೆ ಪಾಸ್ ನೀಡಿದ ಅಧಿಕಾರಿ ವಜಾ
ಪಾಡ್ನಾ : ರಾಜಸ್ಥಾನದ ಕೋಟಾ ನಗರದಲ್ಲಿದ್ದ ತನ್ನ ಪುತ್ರಿಯನ್ನು ವಾಪಸ್ ಕರೆ ತರಲು ಬಿಜೆಪಿ ಶಾಸಕನಿಗೆ ಪ್ರಯಾಣದ ಪಾಸ್ ನೀಡಿದ ಬಿಹಾರದ ನವಾಡ ಜಿಲ್ಲೆಯ ಸದರ್ ಎಂಬಲ್ಲಿನ ಉಪವಿಭಾಗೀಯ ಅಧಿಕಾರಿ ಅನಿಲ್ ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಹಿಸುವಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅನಿಲ್ ಸಿಂಗ್ ಅವರು ಈ ಅಧಿಕಾರಿಯಿಂದ ಎಪ್ರಿಲ್ 15ರಂದು ಪಾಸ್ ಪಡೆದು ಮರುದಿನವೇ ಕೋಟಾಗೆ ಪ್ರಯಾಣಿಸಿ ತಮ್ಮ 17 ವರ್ಷದ ಪುತ್ರಿಯನ್ನು ಅಲ್ಲಿಂದ ಕರೆದುಕೊಂಡು ಬಂದಿದ್ದರು. ಕೋಚಿಂಗ್ ಕ್ಲಾಸುಗಳು ಸ್ಥಗಿತಗೊಂಡ ನಂತರ ಹೆಚ್ಚಿನ ಹಾಸ್ಟೆಲ್ ನಿವಾಸಿಗಳು ತಮ್ಮ ಮನೆಗಳಿಗೆ ವಾಪಸಾಗಿದ್ದರಿಂದ ತಮ್ಮ ಮೆಡಿಕಲ್ ಸೀಟ್ ಆಕಾಂಕ್ಷಿ ಮಗಳು ಒಬ್ಬಂಟಿಯಾಗಿ ಖಿನ್ನತೆಗೊಳಗಾಗಿದ್ದಳು ಎಂದು ಶಾಸಕ ಹೇಳಿಕೊಂಡಿದ್ದರು.
ಇತರ ಸಂದರ್ಭಗಳಲ್ಲಿ ಅಂತರ-ರಾಜ್ಯ ಪ್ರಯಾಣಕ್ಕೆ ಅನುಮತಿ ನೀಡಬಾರದೆಂಬ ನಿಯಮವಿದ್ದರೂ ಪಾಸ್ ನೀಡಿ ಅಧಿಕಾರಿ ನಿರ್ಲಕ್ಷ್ಯ ತೋರಿದ್ದಾರೆಂದು ಅವರ ವಜಾ ಆದೇಶದಲ್ಲಿ ತಿಳಿಸಲಾಗಿದೆ. ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೂ ಶಿಫಾರಸು ಮಾಡಲಾಗಿದೆ.