ಎ.24, 25ರಂದು ಮಂಗಳೂರು, ಉಡುಪಿಯಲ್ಲಿ ಶೂನ್ಯ ನೆರಳಿನ ದಿನ

ಉಡುಪಿ, ಎ. 22: ಪ್ರತಿ ವರ್ಷ ಎರಡು ನಿರ್ದಿಷ್ಟ ದಿನಗಳಂದು ಅಪರಾಹ್ನ ಯಾವುದಾದರೂ ವಸ್ತುವನ್ನು ಲಂಬವಾಗಿ ಇಟ್ಟರೆ ಅದರ ನೆರಳು ಬೀಳುವುದಿಲ್ಲ. ಈ ದಿನಗಳನ್ನು ಶೂನ್ಯ ನೆರಳಿನ ದಿನ ಎಂದು ಕರೆಯುತ್ತಾರೆ. ಇದೊಂದು ಅದ್ಭುತ ಹಾಗೂ ಅತ್ಯಂತ ಸುಲಭವಾದ ಖಗೋಳ ವಿದ್ಯಮಾನ. ಇದನ್ನು ನೋಡಿ ಆನಂದಿಸಲು ಯಾವುದೇ ಉಪಕರಣ ಬೇಡ ಹಾಗೂ ವೀಕ್ಷಿಸಲು ಯಾವುದೇ ಮುನ್ನೆಚ್ಚರಿಕೆಯ ಅಗತ್ಯವೂ ಇರುವುದಿಲ್ಲ.
ನೆರಳು ಹೇಗೆ ಮೂಡುತ್ತದೆ?
ಒಂದು ವಸ್ತುವಿನ ಮೂಲಕ ಬೆಳಕನ್ನು ಪರದೆಯ ಮೇಲೆ ಹಾಯಿಸುವಾಗ ಆ ವಸ್ತು, ಬೆಳಕನ್ನು ನಿರ್ಬಂಧಿಸುವುದರಿಂದ ನೆರಳು ರಚಿತವಾಗುತ್ತದೆ. ಉದಾಹರಣೆಗೆ ಸೂರ್ಯನು ಬೆಳಕಿನ ಮೂಲ ನೀವು ವಸ್ತು ಹಾಗೂ ನೆಲ ಪರದೆ ಎಂದು ಕಲ್ಪಿಸಿಕೊಂಡರೆ, ಸೂರ್ಯನು ಆಕಾಶದಲ್ಲಿ ಲಂಬವಾಗಿ ಚಲಿಸುವಾಗ ನಮ್ಮ ನೆರಳು, ನಮ್ಮ ಪಾದಕ್ಕೆ ಹೊಂದಿಕೊಂಡಂತೆ ರಚಿತವಾಗುತ್ತದೆ. ಸೂರ್ಯ ಚಲಿಸುತ್ತಿದ್ದಂತೆ, ಸೂರ್ಯಾಸ್ತದೊಂದಿಗೆ ನೆರಳೂ ಮರೆಯಾಗುತ್ತದೆ. ಆದರೆ ಸೂರ್ಯ ನೇರವಾಗಿ ನಮ್ಮ ತಲೆಯ ಮೇಲೆ ಹೊಳೆಯುತ್ತಿದ್ದರೆ, ಆಗ ನಮ್ಮ ನೆರಳು ಸರಿಯಾಗಿ ನಮ್ಮ ಕೆಳಗೇ ಇರುತ್ತದೆ, ಅದ್ದರಿಂದ ಅದು ಕಾಣುವುದಿಲ್ಲ ಇದನ್ನೇ ಶೂನ್ಯ ನೆರಳು ಎನ್ನುತ್ತೇವೆ.
ಸೂರ್ಯನು ಆಕಾಶದಲ್ಲಿ ಚಲಿಸುತ್ತಾ ಅಪರಾಹ್ನ 12 ಗಂಟೆ ಆಸುಪಾಸಿನಲ್ಲಿ ನಮ್ಮ ತಲೆಯ ಮೇಲಿರುತ್ತಾನೆಂಬುದು ನಮಗೆ ಗೊತ್ತಿದೆ. ಆದರೆ ಸೂರ್ಯ ಪ್ರತಿದಿನವೂ ನೇರವಾಗಿ ನಮ್ಮ ಮೇಲಿರುವುದಿಲ್ಲ. ಖಗೋಳಶಾಸ್ತ್ರದಲ್ಲಿ ಜೆನಿತ್ ಅಥವಾ ತುತ್ತತುದಿ ಎಂಬ ಕಾಲ್ಪನಿಕ ಬಿಂದು ಒಂದಿದೆ. ಈ ಬಿಂದು ಒಂದು ನಿರ್ದಿಷ್ಟ ಸ್ಥಳದ ನೇರವಾಗಿ ಮೇಲೆ ಇರುವ ಬಿಂದು. ಸೂರ್ಯ ಈ ಕಾಲ್ಪನಿಕ ಬಿಂದುವಿನ ಮೂಲಕ ಹಾದು ಹೋಗುವಾಗ ಶೂನ್ಯ ನೆರಳು ಸೃಷ್ಟಿಯಾಗುತ್ತದೆ.
ಪ್ರತಿದಿನ ಅಪರಾಹ್ನದ ವೇಳೆ ಸೂರ್ಯನು ಈ ಬಿಂದುವಿನ ಸ್ವಲ್ಪ ಎಡಗಡೆ ಅಥವಾ ಬಲಗಡೆ ಇರುತ್ತಾನಾದುದರಿಂದ ಸಣ್ಣ ನೆರಳು ಇದ್ದೇ ಇರುತ್ತದೆ. ಆದರೆ ಸಾಮಾನ್ಯವಾಗಿ ವರ್ಷದಲ್ಲಿ ಎರಡು ದಿನ ಮಾತ್ರ (ಸ್ಥಳವನ್ನು ಅವಲಂಬಿಸಿ) ಸೂರ್ಯ ಈ ಕಾಲ್ಪನಿಕ ಬಿಂದುವಿನಲ್ಲಿದ್ದು ಆಗ ವಸ್ತುವಿನ ನೆರಳು ಬೀಳುವುದಿಲ್ಲ ಎಂದು ಅವರು ವಿವರಿಸಿದರು.
ಶೂನ್ಯ ನೆರಳು ಸಂಭವಿಸುವುದು ಹೇಗೆ ?
ಎಲ್ಲರಿಗೂ ತಿಳಿದಿರುವಂತೆ ಭೂಮಿ 23.5ಡಿಗ್ರಿಯಷ್ಟು ಓರೆಯಾಗಿ ತನ್ನದೇ ಅಕ್ಷದ ಸುತ್ತ ಸುತ್ತುತದೆ ಹಾಗು ಇದರಿಂದಲೇ ಋತುಗಳಾಗುತ್ತವೆ. ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವುದರಿಂದ, ಭೂಮಿಯ ಉತ್ತರ ಧ್ರುವವು ಒಮ್ಮೆ ಸೂರ್ಯನ ಕಡೆಗೂ ಮತ್ತೊಮ್ಮೆ ಸೂರ್ಯನ ವಿರುದ್ಧ ದಿಕ್ಕಿನಲ್ಲಿಯೂ ಇರುತ್ತದೆ. ಇದರಿಂದಾಗಿ ಸೂರ್ಯನ ಚಲನಾಪಥವು ಭೂಮಿಯ ಮೇಲ್ಮೈನಲ್ಲಿ ಅಲೆಯ ಹಾಗೆ ಇರುತ್ತದೆ.
ಇದೇ ಚಲನೆಯನ್ನು ಭೂಮಿಯ ಮೇಲೆ ಯಾವುದೋ ಒಂದು ಪ್ರದೇಶದಿಂದ ನೋಡಿದರೆ, ದಿನ ಕಳೆದಂತೆ ಸೂರ್ಯನು ಸಮಭಾಜಕ ವೃತ್ತದಿಂದ ಅತ್ಯಂತ ಉತ್ತರಕ್ಕೂ, ನಂತರ ಹಿಂದಿರುಗಿ ಅತ್ಯಂತ ದಕ್ಷಿಣಕ್ಕೂ ಹೋಗುವಂತೆ ಭಾಸವಾಗುತ್ತದೆ. ಈ ಅತ್ಯಂತ ಉತ್ತರ (ಜೂನ್ 21) ಹಾಗು ಅತ್ಯಂತ ದಕ್ಷಿಣದ ( ಡಿಸೆಂಬರ್ 21) ಬಿಂದುಗಳನ್ನು ನಾವು ಸಂಕ್ರಾಂತಿ ಎಂದು ಕರೆಯುತ್ತೇವೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗು ಮಕರ ಸಂಕ್ರಾಂತಿ ವೃತ್ತದ ಮಧ್ಯ ಪ್ರದೇಶದಲ್ಲಿ ನೀವು ಇರುವವರಾದರೆ ಈ ಎರಡು ಸಂಕ್ರಾಂತಿಗಳ ಮಧ್ಯೆ, ಎರಡು ದಿನ ಸೂರ್ಯನು ನೇರವಾಗಿ ನಿಮ್ಮ ಪ್ರದೇಶದ ಮೇಲಿರುತ್ತಾನೆ. ಈ ಎರಡು ದಿನಗಳ ಮಧ್ಯಾಹ್ನ, ಯಾವುದೇ ನೆರಳು ಬೀಳುವುದಿಲ್ಲ. ಹೀಗಾಗಿ ಈ ದಿನಗಳನ್ನು ಶೂನ್ಯ ನೆರಳಿನ ದಿನಗಳೆಂದು ಕರೆಯಲಾಗುತ್ತದೆ.
ನೋಡುವುದು ಹೇಗೆ ?
ವರ್ಷದಲ್ಲಿ ಎಪ್ರಿಲ್ ಮತ್ತು ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ಶೂನ್ಯ ನೆರಳಿನ ದಿನ ಸಂಭವಿಸಿದರೂ, ಮಳೆಗಾಲದ ಕಾರಣ ಆಗಸ್ಟ್‌ನಲ್ಲಿ ಶೂನ್ಯ ನೆರಳಿನ ದಿನವನ್ನು ವೀಕ್ಷಿಸುವುದು ಕಷ್ಟ. ಹೀಗಾಗಿ ಕರಾವಳಿಯಲ್ಲಿ ಎಪ್ರಿಲ್ 24 ಮತ್ತು 25ರಂದು ಶೂನ್ಯ ನೆರಳು ಸಂಭವಿಸು ವಾಗಲೇ ಇದನ್ನು ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.
ಈ ದಿನದಂದು ನಿಮ್ಮ ಮನೆಯ ಅಂಗಳ ಅಥವಾ ಟೆರೇಸ್‌ಗೆ ಹೋಗಿ ಶೂನ್ಯ ನೆರಳನ್ನು ಗಮನಿಸಬಹುದು. ಶೂನ್ಯ ನೆರಳನ್ನು ಇದಕ್ಕಿಂತಲೂ ಉತ್ತಮವಾಗಿ ಪರೀಕ್ಷಿಸಲು ಒಳ್ಳೆಯ ಉಪಾಯವೆಂದರೆ, ಒಂದು ಕೊಳವೆಯನ್ನು ತೆಗೆದು ಕೊಂಡು, ಅದನ್ನು ಲಂಬವಾಗಿ ಇರಿಸಬೇಕು. ಸೂರ್ಯ ಮೇಲೆ ಮೇಲೆ ಬರುತ್ತಿದ್ದಂತೆ ನೆರಳು ಸಣ್ಣದಾಗುತ್ತಾ ಹೋಗುವುದನ್ನು ಗಮನಿಸಬಹುದು. ಹಾಗೆ ಒಂದು ನಿರ್ದಿಷ್ಟ ಸಮಯದಲ್ಲಿ ನೆರಳು ಕಾಣದಂತಾಗುತ್ತದೆ.
ಈ ವಿದ್ಯಮಾನವನ್ನು ಪ್ರಕೃತಿಪ್ರಿಯರು, ಹವ್ಯಾಸಿ ಖಗೋಳ ವೀಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ನೋಡಿ ಆನಂದಿಸಬಹುದು. ಈಗಂತೂ ಕೊರೋನ ವೈರಸ್ ಕಾರಣಕ್ಕಾಗಿ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರುವುದರಿಂದ ಎಲ್ಲರೂ ಅಪಾಯರಹಿತವಾದ ಈ ಖಗೋಳ ವಿದ್ಯಾಮಾನವನ್ನು ಬರಿಗಣ್ಣಿನಲ್ಲೇ ವೀಕ್ಷಿಸಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಶೂನ್ಯ ನೆರಳಿನ ದಿನದಂದು......
ಒಂದು ವರ್ಷದಲ್ಲಿ ಸೂರ್ಯನು ಈ ಸಂಕ್ರಾಂತಿ ವೃತ್ತಗಳ ಮಧ್ಯೆ ಸಾಗುತ್ತಾ ಸಮಭಾಜಕ ವೃತ್ತವನ್ನು ಎರಡು ಬಾರಿ ಹಾದು ಹೋಗುತ್ತದೆ. ಈ ಘಟನೆ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಎಪ್ರಿಲ್ ಹಾಗು ಆಗಸ್ಟ್ ತಿಂಗಳಲ್ಲಿ ನಡೆಯುತ್ತದೆ. ಇದರ ದಿನಾಂಕ ಹಾಗೂ ವೇಳಾಪಟ್ಟಿ ಹೀಗಿದೆ.
ಮಂಗಳೂರು: ಎಪ್ರಿಲ್ 24ರಂದು ಅಪರಾಹ್ನ 12:28ಕ್ಕೆ ಹಾಗೂ ಆಗಸ್ಟ್ 18ಕ್ಕೆ ಅಪರಾಹ್ನ 12:33ಕ್ಕೆ.
ಉಡುಪಿ: ಎಪ್ರಿಲ್ 25ರಂದು ಅಪರಾಹ್ನ 12:29ಕ್ಕೆ ಹಾಗೂ ಆಗಸ್ಟ್ 17ಕ್ಕೆ ಅಪರಾಹ್ನ 12:34ಕ್ಕೆ








