ಮಳವಳ್ಳಿ: ಸೋಂಕು ನಿವಾರಕ ಸಿಂಪಡಣೆ ವೇಳೆ ಕುಸಿದು ಬಿದ್ದು ಪೌರಕಾರ್ಮಿಕ ಮೃತ್ಯು

ಸಾಂದರ್ಭಿಕ ಚಿತ್ರ
ಮಳವಳ್ಳಿ, ಎ.22: ಸೋಂಕು ನಿವಾರಕ ಸಿಂಪಡಣೆ ವೇಳೆ ಪೌರ ಕಾರ್ಮಿಕರೊಬ್ಬರು ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ.
ತಾಲೂಕಿನ ಕಲ್ಕುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡುತ್ತಿದ್ದ ಅದೇ ಗ್ರಾ.ಪಂ.ನ ಡಿ ಗ್ರೂಪ್ ನೌಕರ ಬಸವರಾಜು (46) ಮೃತಪಟ್ಟ ಪೌರಕಾರ್ಮಿಕ ಎಂದು ತಿಳಿದುಬಂದಿದೆ.
ಹಳ್ಳಿಗಳಲ್ಲಿ ಬಸವರಾಜು ಅವರು ಸೋಂಕು ನಿವಾರಕ ಸಿಂಪಡಣೆ ಮಾಡುತ್ತಿದ್ದರು. ಮಂಗಳವಾರ ಕೆಲಸ ಮಾಡುವಾಗ ಅವರು ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಿಂಪಡಿಸಿದ್ದ ಸೋಂಕು ನಿವಾರಕ ಔಷಧದಿಂದಲೇ ಮೃತ ಬಸವರಾಜು ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ.
ಘಟನೆ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





