ಕೋವಿಡ್-19: ಆಝಾದ್ಪುರ ಮಾರುಕಟ್ಟೆಯ ವ್ಯಾಪಾರಿ ಸಾವು, ಇತರ ವ್ಯಾಪಾರಿಗಳಲ್ಲಿ ಆತಂಕ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಎ.22: ದಿಲ್ಲಿಯ ಆಝಾದ್ಪುರ ಸಗಟು ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ 57ರ ಹರೆಯದ ಹಲಸಿನಹಣ್ಣು ವ್ಯಾಪಾರಿ ಯೋರ್ವರು ಕೊರೋನ ವೈರಸ್ ಸೋಂಕಿನಿಂದಾಗಿ ಮಂಗಳವಾರ ಮೃತಪಟ್ಟಿದ್ದಾರೆ. ಈ ವ್ಯಕ್ತಿಯ ಸಾವು ಇತರ ವ್ಯಾಪಾರಿಗಳಲ್ಲಿ ಭೀತಿಯನ್ನು ಸೃಷ್ಟಿಸಿದ್ದು,ಸೋಂಕು ಹರಡುವುದನ್ನು ತಡೆಯಲು ಮಾರುಕಟ್ಟೆಯನ್ನು ಮುಚ್ಚುವಂತೆ ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. ದಿಲ್ಲಿ ಸರಕಾರವು ಸೋಮವಾರವಷ್ಟೇ ಆಝಾದ್ಪುರ ಮಾರುಕಟ್ಟೆಯನ್ನು ದಿನದ 24 ಗಂಟೆಯೂ ತೆರೆಯಲು ಅನುಮತಿ ನೀಡಿತ್ತು.
ಮಜ್ಲಿಸ್ ಪಾರ್ಕ್ ನಿವಾಸಿಯಾಗಿದ್ದ ಮೃತನ ಸ್ಯಾಂಪಲ್ಗಳನ್ನು ಎ.19ರಂದು ಸಂಗ್ರಹಿಸಲಾಗಿದ್ದು, ಅವರಲ್ಲಿ ಕೊರೋನ ವೈರಸ್ ಸೋಂಕು ಇರುವುದು ಸೋಮವಾರ ದೃಢಪಟ್ಟಿತ್ತು. ಪರೀಕ್ಷೆಗೊಳಗಾಗುವ ಎರಡು ದಿನಗಳ ಮೊದಲು ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರೆ ಎಂದು ಜಿಲ್ಲಾಧಿಕಾರಿ (ಉತ್ತರ) ದೀಪಕ ಶಿಂಧೆ ಅವರು ಸುದ್ದಿಗಾರರಿಗೆ ತಿಳಿಸಿದರು.
ಮೃತರ ಸಂಪರ್ಕಕ್ಕೆ ಬಂದಿದ್ದ ಜನರನ್ನು ಪತ್ತೆ ಹಚ್ಚಲು ತಂಡವೊಂದನ್ನು ನಿಯೋಜಿಸಲಾಗಿದೆ. ಅವರ ವ್ಯವಹಾರ ಪಾಲುದಾರನನ್ನೂ ಸಂಪರ್ಕಿಸಲಾಗುತ್ತಿದ್ದು,ಮೃತ ವ್ಯಾಪಾರಿಯ ಅಂಗಡಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳನ್ನು ನಿರ್ಬಂಧಿಸಲಾಗಿದೆ ಎಂದರು.
ಆಝಾದ್ಪುರ ಮಾರುಕಟ್ಟೆಯಲ್ಲಿ ಕೊರೋನ ವೈರಸ್ ಪ್ರಕರಣ ದೃಢಪಟ್ಟಿರುವುದು ಇದೇ ಮೊದಲಲ್ಲ. ಈ ಹಿಂದೆ ಶಾಲಿಮಾರ್ ಬಾಗ್ನ ಓರ್ವ ಟೊಮೆಟೊ ವ್ಯಾಪಾರಿ ಮತ್ತು ತನ್ನೂರಾದ ಉತ್ತರ ಪ್ರದೇಶದ ಘೊಂಡಾಕ್ಕೆ ಮರಳಿರುವ ಕಾಲಿಫ್ಲವರ್ ವ್ಯಾಪಾರಿಯಲ್ಲಿಯೂ ಸೋಂಕು ದೃಢಪಟ್ಟಿತ್ತು ಎಂದು ಅಧಿಕಾರಿಯೋರ್ವರು ತಿಳಿಸಿದರು.
ಮಾರುಕಟ್ಟೆಯಲ್ಲಿ ಸೋಂಕು ಹರಡುವಿಕೆಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಹೊಂದಿದ್ದಾರೆ ಎಂದು ಆರೋಪಿಸಿರುವ ವ್ಯಾಪಾರಿಗಳು ಸದ್ಯಕ್ಕೆ ಮಾರುಕಟ್ಟೆಯನ್ನು ಮುಚ್ಚಲು ಸರಕಾರವನ್ನು ಆಗ್ರಹಿಸಿದ್ದಾರೆ. ಬಯಲು ಪ್ರದೇಶದಲ್ಲಿ ಸುರಕ್ಷಿತ ಅಂತರ ನಿಯಮಗಳನ್ನು ಕಾಯ್ದುಕೊಂಡು ವ್ಯಾಪಾರ ನಡೆಸಲು ಸಿದ್ಧರಿದ್ದೇವೆ ಎಂದಿದ್ದಾರೆ.
ಏಷ್ಯಾದ ಅತ್ಯಂತ ದೊಡ್ಡ ಸಗಟು ವ್ಯಾಪಾರ ಸ್ಥಳವಾಗಿರುವ ಆಝಾದ್ಪುರ ಮಾರುಕಟ್ಟೆಯು 78 ಎಕರೆ ವಿಸ್ತೀರ್ಣ ಹೊಂದಿದ್ದು, ಪ್ರತಿ ದಿನ ಎರಡು ಲಕ್ಷಕ್ಕೂ ಅಧಿಕ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಮಾರುಕಟ್ಟೆಯು ದಿಲ್ಲಿ ಮತ್ತು ನೆರೆಯ ಉತ್ತರ ಪ್ರದೇಶ ಹಾಗೂ ಹರ್ಯಾಣಗಳ ಶೇ.70ರಷ್ಟು ಅಗತ್ಯಗಳನ್ನು ಪೂರೈಸುತ್ತಿದೆ.
ದಿಲ್ಲಿಯಲ್ಲಿ ಈವರೆಗೆ 2,155 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದು, 47 ಜನರು ಮೃತಪಟ್ಟಿದ್ದಾರೆ.







