ಭೀಕರ ಪ್ರಮಾಣದ ಬರಗಾಲಗಳ ತೆಕ್ಕೆಗೆ ಜಗತ್ತು: ವಿಶ್ವ ಆಹಾರ ಸಂಸ್ಥೆ ಎಚ್ಚರಿಕೆ

ವಿಶ್ವಸಂಸ್ಥೆ, ಎ. 22: ಜಗತ್ತು ‘ಹಸಿವಿನ ಸಾಂಕ್ರಾಮಿಕ’ದ ದಾಳಿಗೆ ಒಳಗಾಗುವ ಹೊಸ್ತಿಲಲ್ಲಿದೆ ಹಾಗೂ ಕೋವಿಡ್-19ರಿಂದಾಗಿ ಉಂಟಾಗಿರುವ ಹಣದ ಕೊರತೆ ಮತ್ತು ವ್ಯಾಪಾರ ಸಂಕಷ್ಟವನ್ನು ನಿಭಾಯಿಸಲು ದೇಶಗಳು ಒಂದಾಗದಿದ್ದರೆ ಕೆಲವೇ ತಿಂಗಳುಗಳಲ್ಲಿ ಭೀಕರ ಪ್ರಮಾಣದ ಬರಗಾಲಗಳನ್ನು ಜಗತ್ತು ಎದುರಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಆಹಾರ ಸಂಸ್ಥೆ ಎಚ್ಚರಿಸಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿರುವ ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕದ ಸೋಂಕಿಗೆ ಈವರೆಗೆ 25,65,290 ಮಂದಿ ಒಳಗಾಗಿದ್ದಾರೆ ಹಾಗೂ 1,77,770ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
‘‘ಕೋವಿಡ್-19 ಸಾಂಕ್ರಾಮಿಕವನ್ನು ಎದುರಿಸುತ್ತಿರುವ ಹೊತ್ತಿನಲ್ಲಿಯೇ ನಾವು ಹಸಿವಿನ ಸಾಂಕ್ರಾಮಿಕದ ದಾಳಿಗೂ ಒಳಗಾಗುವ ಹೊಸ್ತಿಲಲ್ಲಿದ್ದೇವೆ’’ ಎಂದು ವಿಶ್ವ ಆಹಾರ ಕಾರ್ಯಕ್ರಮದ ಕಾರ್ಯಕಾರಿ ನಿರ್ದೇಶಕ ಡೇವಿಡ್ ಬೀಸ್ಲೇ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ‘ಅಂತರ್‌ರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ನಿರ್ವಹಣೆ: ಬಿಕ್ಕಟ್ಟಿನಿಂದ ಸೃಷ್ಟಿಯಾಗಿರುವ ಹಸಿವೆಯಿಂದ ಬಾಧಿತರಾಗಿರುವ ನಾಗರಿಕರ ರಕ್ಷಣೆ’ ಎಂಬ ವಿಷಯದ ಬಗ್ಗೆ ಮಂಗಳವಾರ ನಡೆದ ವೀಡಿಯೋಕಾನ್ಫರೆನ್ಸ್ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
‘‘ಈವರೆಗೂ ಬರಗಾಲ ತಲೆದೋರಿಲ್ಲ. ಆದರೆ, ನಿಧಿ ಕೊರತೆ ಮತ್ತು ವ್ಯಾಪಾರ ಬಿಕ್ಕಟ್ಟಿನಿಂದಾಗಿ ಉಂಟಾಗಲಿರುವ ಪರಿಸ್ಥಿತಿಯನ್ನು ಎದುರಿಸಲು ನಾವು ಈಗಲೇ ಕ್ರಮ ತೆಗೆದುಕೊಳ್ಳದಿದ್ದರೆ ಕೆಲವೇ ತಿಂಗಳ ಅವಧಿಯಲ್ಲಿ ನಾವು ಹಲವಾರು ಅಗಾಧ ಪ್ರಮಾಣದ ಬರಗಾಲಗಳನ್ನು ಎದುರಿಸಬೇಕಾಗಬಹುದು’’ ಎಂದರು.







