ಗಂಜಿಮಠ: ಬಿಗ್‌ಬ್ಯಾಗ್ಸ್ ಕಂಪೆನಿಯ ಕಾರ್ಯಾಚರಣೆ; ಕಂದಾವರ ಗ್ರಾಮದ ಸಾರ್ವಜನಿಕರ ಅಹವಾಲು ಸಭೆ
ಗುರುಪುರ, ಎ.22: ಲಾಕ್‌ಡೌನ್ ಆದೇಶದ ಹೊರತಾಗಿಯೂ ಕೇಂದ್ರ ಸರಕಾರದ ಎ.15ರ ಪರಿಷ್ಕೃತ ಮಾರ್ಗಸೂಚಿಯಂತೆ ಗಂಜಿಮಠದ ಕೈಗಾರಿಕೋದ್ಯಮ ಪ್ರದೇಶದಲ್ಲಿ ಸುಮಾರು ಒಂದೂವರೆ ಸಾವಿರದಷ್ಟು (ಶೇ.50) ಕಾರ್ಮಿಕರಿಂದ ಸೋಮವಾರ ಕೆಲಸ ಮುಂದುವರಿಸಿರುವ ಬಿಗ್‌ಬ್ಯಾಗ್ಸ್ ಇಂಟರ್‌ನ್ಯಾಶನಲ್ ಕಂಪೆನಿ ವಿರುದ್ಧ ಸ್ಥಳೀಯರಿಂದ ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಬುಧವಾರ ಕಂದಾವರ ಗ್ರಾಪಂ ಸಭಾಭವನದಲ್ಲಿ ತುರ್ತು ಸಾರ್ವಜನಿಕ ಅಹವಾಲು ಸಭೆ ನಡೆಸಿದರು.
ಕೊರೋನ ಭೀತಿಯ ನಡುವೆ ಎಲ್ಲ ಕಂಪೆನಿಗಳು ಬಂದ್ ಆಗಿದ್ದರೂ, ಗಂಜಿಮಠದ ಈ ಕಂಪೆನಿ ತೆರೆದಿರುವ ಹಾಗೂ ಇಲ್ಲಿ ಹೊರ ರಾಜ್ಯ-ಜಿಲ್ಲೆಗಳ ನೂರಾರು ಮಂದಿ ಕೆಲಸ ಮಾಡುವ ಬಗ್ಗೆ ಸಾರ್ವಜನಿಕ ವಲಯದ ಜನಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮೇ 3ರರವರೆಗೆ ಕಂಪೆನಿ ಮುಚ್ಚುವಂತೆ ಮನವಿ ಮಾಡಿದರು.
ಜಿಪಂ ಸದಸ್ಯ ಜನಾರ್ದನ ಗೌಡ ಮಾತನಾಡಿ, ಲಾಕ್‌ಡೌನ್ ಆದೇಶವಿರುವಾಗಲೇ ಅನ್ಯ ರಾಜ್ಯಗಳಿಂದ ಇಲ್ಲಿಗೆ ಕಾರ್ಮಿಕರು ಬಂದಿದ್ದಾರೆ. ಕೊರೋನ ಭೀತಿಯಿಂದ ಪಕ್ಕದ ಬಂಟ್ವಾಳದ ಕೆಲವು ಭಾಗ ಸೀಲ್‌ಡೌನ್ ಆಗಿದ್ದು, ಕಂಪೆನಿಯ ಪ್ರಸಕ್ತ ಬಿಗು ನಿಲುವಿನಿಂದ ಪರಿಸರವಾಸಿಗಳಲ್ಲಿ ಆತಂಕ ಹೆಚ್ಚಿದೆ. ಆದ್ದರಿಂದ ಮುಂದಿನ ಆದೇಶದವರೆಗೆ ಕಂಪೆನಿ ಮುಚ್ಚಬೇಕು ಎಂದರು.
ಸ್ಥಳೀಯರಾದ ಸುರೇಶ್ ಅಂಚನ್, ಹರೀಶ್ ಕಾಮತ್ ಹಾಗೂ ಹರೀಶ್ ಮಟ್ಟಿ ಮಾತನಾಡಿ, ಕಂಪೆನಿಯ ಪ್ರಸಕ್ತ ನಿರ್ಧಾರದಿಂದ ಈ ಭಾಗದಲ್ಲಿ ಕೊರೋನ ಅನಾಹುತಗಳೇನಾದರೂ ಸಂಭವಿಸಿದರೆ ಅದಕ್ಕೆ ಕಂಪೆನಿ ಮಾಲಕರೇ ಹೊಣೆಯಾಗುತ್ತಾರೆ. ನಾಲ್ಕು ದಿನಗಳ ಹಿಂದೆ ಕಂಪೆನಿಗೆ ತುಮಕೂರಿನಿಂದ ನಾಲ್ವರು, ಕೇರಳದಿಂದ ಇಬ್ಬರು ಹಾಗೂ ಚಿಕ್ಕಮಗಳೂರು, ಮೈಸೂರಿನಿಂದಲೂ ಕಾರ್ಮಿಕರು ಬಂದಿದ್ದಾರೆ. ಕಂಪೆನಿಯ ಕಾರ್ಮಿಕರು ಗಂಜಿಮಠದ ಆಸುಪಾಸಿನ ಬಾಡಿಗೆ ಮನೆಗಳಲ್ಲಿ ಗುಂಪುಗುಂಪಾಗಿ ವಾಸಿಸುತ್ತಿದ್ದಾರೆ. ಕಂಪೆನಿಗೆ ಯಾರೂ ವಿರೋಧಿಗಳಿಲ್ಲ. ಆದರೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿರುವ ಬಿಗ್‌ಬಾಗ್ಸ್ ಕಂಪೆನಿ ಮೇ.3ರವರೆಗೆ ಮುಚ್ಚಬೇಕು ಎಂದು ಒತ್ತಾಯಿಸಿದರು.
ತಾಪಂ ಸದಸ್ಯ ಸುನಿಲ್ ಜಿ. ಹಾಗೂ ಗಂಜಿಮಠ ಗ್ರಾಪಂ ಮಾಜಿ ಅಧ್ಯಕ್ಷೆ ಜೆಸಿಂತಾ ಡಿಕುನ್ಹಾ ಪರಿಸರವಾಸಿಗಳ ಭೀತಿ ನಿವಾರಣೆಗೆ ಕ್ರಮ ಕೈಗೊಂಡು, ಸರಕಾರದ ಮಾರ್ಗಸೂಚಿಯಂತೆ ಕಂಪೆನಿ ನಡೆಸಬಹುದೆಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ತಾಪಂ ಇಒ ಸದಾನಂದ ಸಫಲಿಗ, ಕೈಗಾರಿಕೆಗಳ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಕೋವಿಡ್-19 ವಿಶೇಷ ಅಧಿಕಾರಿ ಬಿನಯ್ ಪಿ.ಕೆೆ, ಉಪ ತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ ಆಸೀಫ್ ಅಲಿ, ಸಾರ್ವಜನಿಕ ಪ್ರತಿನಿಧಿಗಳಾದ ಭುಜಂಗ ಕುಲಾಲ್, ಸುನೀಲ್ ಫೆರ್ನಾಂಡಿಸ್, ಸೋಹನ್ ಅಧಿಕಾರಿ, ಕಂಪೆನಿ ಪ್ರತಿನಿಧಿಗಳಾದ ನಿರಂಜನ್ ಶೆಟ್ಟಿ, ಶ್ರೀನಾಥ್, ಮಮತಾ, ಗಂಜಿಮಠ ಗ್ರಾಪಂ ಉಪಾಧ್ಯಕ್ಷ ಝಾಕೀರ್ ಮತ್ತಿತರರು ಉಪಸ್ಥಿತರಿದ್ದರು.
ಬಿಗ್‌ಬ್ಯಾಗ್ಸ್ ಅತ್ಯಾವಶ್ಯಕ ಸೊತ್ತುಗಳ ತಯಾರಿಕಾ(ಚೀಲ) ಕಂಪೆನಿಯಾಗಿದ್ದು, ಕೇಂದ್ರ ಸರಕಾರದ ಎ.15ರ ಮಾರ್ಗಸೂಚಿಯಂತೆ ಸಹಾಯಕ ಆಯುಕ್ತರು ನೀಡಿರುವ 21 ಎಚ್ಚರಿಕಾ ಕ್ರಮಗಳಂತೆ 3.50 ಚ.ಅ. ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಬಿಗ್‌ಬ್ಯಾಗ್ಸ್ ಕೆಲಸ ಮುಂದುವರಿಸಿದೆ. ಲಾಕ್‌ಡೌನ್‌ಗೆ ಮುಂಚೆ 3,000 ಕಾರ್ಮಿಕರಿದ್ದರೆ, ಈಗ ಸುಮಾರು 1,500 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ರಜೆಯಲ್ಲಿ ತೆರಳಿರುವ ಅಥವಾ ಹೊರ ಜಿಲ್ಲೆಗಳಲ್ಲಿರುವ ಇಲ್ಲಿನ ಕಾರ್ಮಿಕರು ಒಳಗೆ ಬರಲು ಅವಕಾಶ ನೀಡಿಲ್ಲ. ಒಂದೊಮ್ಮೆ ಅಂತಹ ಕಾರ್ಮಿಕರಿದ್ದರೆ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಸಿದ್ಧನಿದ್ದೇನೆ. ಬೆಂಗಳೂರಿನಲ್ಲಿರುವ ಬಿಗ್‌ಬ್ಯಾಗ್ಸ್ ಕಂಪೆನಿಯಲ್ಲೂ ಕೆಲಸ ನಡೆಯುತ್ತಿದೆ. ಒಂದೊಮ್ಮೆ ಕಂಪೆನಿ ಬಂದ್ ಮಾಡಬೇಕೆಂದು ಹೇಳಿದರೆ ಒಪ್ಪುವೆ. ಆದರೆ ಮುಂದೆ ಯಾವಾಗ ಕಂಪೆನಿ ತೆರೆಯಲಿದ್ದೇನೆ ಎಂಬುದರ ಬಗ್ಗೆ ಭರವಸೆ ನೀಡಲಾರೆ. ಕಂಪೆನಿ ಶಾಶ್ವತವಾಗಿಯೇ ಬಂದ್ ಆಗಬಹುದು. ಆಗ ಸ್ಥಳೀಯರ ಸಹಿತ ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಬಿಗ್‌ಬ್ಯಾಗ್ಸ್ ಮಾಲಕ ರವೀಶ್ ಕಾಮತ್ ಸ್ಪಷ್ಟಪಡಿಸಿದರು.
ತುರ್ತು ಸಭೆ ನಡೆಸಿದ ಜಿಪಂ ಸದಸ್ಯರಾದ ಜನಾರ್ದನ ಗೌಡ, ಯುಪಿ ಇಬ್ರಾಹಿಂ, ತಾಪಂ ಸದಸ್ಯ ಸುನಿಲ್ ಜಿ. ಮತ್ತು ಸುನಿಲ್ ಕಂಪೆನಿ ಆರಂಭಿಸಲು ನಾಲ್ಕು ಷರತ್ತು ಮುಂದಿಟ್ಟರು.
1.ಹೊರ ಜಿಲ್ಲೆ, ರಾಜ್ಯಗಳಿಂದ ಉದ್ಯೋಗ ಪಾಸ್‌ನೊಂದಿಗೆ ಆಗಮಿಸಿರುವ ಕಾರ್ಮಿಕರ ಮಾಹಿತಿ ಕಂಪೆನಿಯಲ್ಲಿದ್ದು, ಅಂತಹವರನ್ನು ತಕ್ಷಣ ಕ್ವಾರಂಟೈನ್ ಮಾಡಬೇಕು.
2.ಹೊರಗಿನ ಮತ್ತು ಕೊರೋನ ಪ್ರದೇಶಗಳಿಂದ ಆಗಮಿಸುವ ಮಂದಿಗೆ ಕಂಪೆನಿಯಲ್ಲಿ ಉದ್ಯೋಗಕ್ಕೆ ಅವಕಾಶ/ಪಾಸ್ ನೀಡಬಾರದು.
3.ಸ್ಥಳೀಯರಲ್ಲಿ ಕೊರೋನ ಆತಂಕ ಇದೆ. ಆದ್ದರಿಂದ ಕಂಪೆನಿಯು ಕರೆದಾಗ ಕೆಲಸಕ್ಕೆ ಹಾಜರಾಗದ ಕಾರ್ಮಿಕರನ್ನು ಭವಿಷ್ಯದಲ್ಲಿ ಕೆಲಸದಿಂದ ತೆಗೆದು ಹಾಕಬಾರದು ಅಥವಾ ಅಂತಹವರಿಗೆ ಕಿರುಕುಳ ನೀಡಬಾರದು.
4. ಒಳ-ಹೊರಗಿನ ಉದ್ಯೋಗಿಗಳು ಕೊರೋನಕ್ಕೆ ಸಂಬಂಧಿಸಿದ ಎಲ್ಲ ನಿಯಮ ಪಾಲಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಕಂಪೆನಿಗೆ ಸ್ಪಷ್ಟ ನಿರ್ದೇಶನ ನೀಡಬೇಕು







