ದೇಶದ 95% ತೈಲ ದಾಸ್ತಾನು ಭರ್ತಿ: ತೈಲ ದರ ಇಳಿಕೆಯ ಲಾಭ ಪಡೆಯಲು ಭಾರತಕ್ಕೆ ಅಸಾಧ್ಯ

ಹೊಸದಿಲ್ಲಿ, ಎ. 22: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ದರದಲ್ಲಿ ಭಾರೀ ಇಳಿಕೆಯಾಗಿದ್ದರೂ ಈ ಪರಿಸ್ಥಿತಿಯ ಲಾಭ ಪಡೆಯುವ ಸ್ಥಿತಿಯಲ್ಲಿ ಭಾರತವಿಲ್ಲ. ಯಾಕೆಂದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದಲ್ಲಿ ತೈಲದ ಬೇಡಿಕೆ ಕುಸಿದಿದ್ದು ಈಗ ದೇಶದಲ್ಲಿರುವ 95% ತೈಲ ಸಂಗ್ರಹಾಗಾರಗಳಲ್ಲಿ ತೈಲದ ದಾಸ್ತಾನು ಇದೆ ಎಂದು Bloomberg ವರದಿ ತಿಳಿಸಿದೆ.
ದೇಶದಲ್ಲಿರುವ 66,000 ಪೆಟ್ರೋಲ್ ಪಂಪ್‌ಗಳಲ್ಲೂ ತೈಲದ ದಾಸ್ತಾನು ಬಹುತೇಕ ತುಂಬಿದೆ. ವಿಶ್ವದಲ್ಲಿ ಅತೀ ಹೆಚ್ಚು ತೈಲ ಬಳಸುವ ದೇಶಗಳಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 85 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ದಾಸ್ತಾನು ಇರಿಸುವ ವ್ಯವಸ್ಥೆಯಿದ್ದು ಇದರಲ್ಲಿ 95% ಈಗಾಗಲೇ ಭರ್ತಿಯಾಗಿದೆ. ಲಾಕ್‌ಡೌನ್‌ನಿಂದ ವಾಹನ ಸಂಚಾರ, ಸರಕು ಸಾಗಾಟ, ಸರಕಾರಿ ಬಸ್ಸುಗಳ ಓಡಾಟಕ್ಕೆ ಬ್ರೇಕ್ ಬಿದ್ದಿರುವುದರಿಂದ ಬೇಡಿಕೆ ವಿಪರೀತ ಕುಸಿದಿದೆ. ಸದ್ಯದಲ್ಲೇ ಬೇಡಿಕೆ ಮತ್ತೆ ತ್ವರಿತವಾಗಿ ಈ ಹಿಂದಿನ ಪ್ರಮಾಣಕ್ಕೆ ಹೆಚ್ಚುವ ನಿರೀಕ್ಷೆಯಿಲ್ಲ ಎಂದು ಭಾರತ್ ಪೆಟ್ರೋಲಿಯಂ ಸಂಸ್ಥೆಯ ರಿಫೈನರೀಸ್ ವಿಭಾಗದ ನಿರ್ದೇಶಕ ಆರ್ ರಾಮಚಂದ್ರನ್ ಅಭಿಪ್ರಾಯ ಪಟ್ಟಿದ್ದಾರೆ.
ಮುಂಬೈ, ದಿಲ್ಲಿ ಮತ್ತು ಕೋಲ್ಕತಾದಂತಹ ಪ್ರಮುಖ ಬಳಕೆ ಕೇಂದ್ರಗಳಲ್ಲಿ ಕೊರೋನ ಸೋಂಕು ಪ್ರಮಾಣ ಹೆಚ್ಚುತ್ತಿರುವುದರಿಂದ ಲಾಕ್‌ಡೌನ್ ಮತ್ತಷ್ಟು ಬಿಗಿಯಾಗಬಹುದು. ಇದರಿಂದ ತೈಲದ ಬೇಡಿಕೆ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ. ಸರಕಾರಿ ಸ್ವಾಮ್ಯದ ಇತರ ಎರಡು ಸಂಸ್ಥೆಗಳಾದ ಹಿಂದುಸ್ತಾನ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಸಂಸ್ಥೆಯಲ್ಲೂ ಇದೇ ಪರಿಸ್ಥಿತಿಯಿದೆ. ಎಪ್ರಿಲ್ ಪ್ರಥಮ ವಾರದಲ್ಲಿ ಡೀಸೆಲ್ ಮತ್ತು ಗ್ಯಾಸೊಲಿನ್ ತೈಲದ ಬಳಕೆ 60%ಕ್ಕಿಂತಲೂ ಕಡಿಮೆಯಾಗಿದೆ. 2020ರ ಎಪ್ರಿಲ್‌ನಲ್ಲಿ ದೇಶದ ಒಟ್ಟು ತೈಲ ಬೇಡಿಕೆಯಲ್ಲಿ 1.4 ಮಿಲಿಯನ್ ಬ್ಯಾರೆಲ್ ಹೆಚ್ಚಾಗಬಹುದು ಎಂದು ಕಳೆದ ವರ್ಷ ಅಂದಾಜಿಸಲಾಗಿತ್ತು.







