ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು: ವೈದ್ಯಕೀಯ ವಿಶ್ಲೇಷಣಾ ವರದಿ

ವಾಶಿಂಗ್ಟನ್, ಎ. 22: ‘ಅದ್ಭುತ ಔಷಧ’ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಂದ ಬಣ್ಣಿಸಲ್ಪಟ್ಟಿರುವ ಮಲೇರಿಯ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್, ನೋವೆಲ್-ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ವಿಫಲವಾಗಿದೆ ಎಂದು ವೈದ್ಯಕೀಯ ವರದಿಯೊಂದು ತಿಳಿಸಿದೆ. ಈ ವರದಿಯನ್ನು ಈಗ ಪರಿಣತರ ಪರಿಶೀಲನೆಗೆ ಒಳಪಡಿಸಲಾಗಿದೆ.
ಸದ್ಯ ಕೊರೋನ ವೈರಸ್‌ಗೆ ಅಂಗೀಕೃತ ಲಸಿಕೆಯಾಗಲಿ, ಔಷಧವಾಗಲಿ ಇಲ್ಲ. ಆದರೆ, ಕೋವಿಡ್-19ರ ಚಿಕಿತ್ಸೆಯಲ್ಲಿ ದಶಕಗಳ ಹಳೆಯ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಆದರೆ, ಅಮೆರಿಕದ ಹಿರಿಯರ ಆಸ್ಪತ್ರೆಗಳಲ್ಲಿ ಈ ಔಷಧವನ್ನು ಬಳಸಿದಾಗ ಪ್ರಯೋಜನಕ್ಕಿಂತ ಹೆಚ್ಚು ಅಪಾಯವೇ ಆಗಿದೆ ಎಂದು ವೆಟರನ್ಸ್ ಹೆಲ್ತ್ ಅಡ್ಮಿನಿಸ್ಟ್ರೇಶನ್‌ನ ಅಂಕಿಅಂಶಗಳನ್ನು ವಿಶ್ಲೇಷಿಸಿರುವ ವರದಿ ತಿಳಿಸಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಸೇವಿಸಿದ 97 ರೋಗಿಗಳ ಪೈಕಿ 28 ಶೇಕಡ ಮೃತಪಟ್ಟಿದ್ದಾರೆ. ಅದೇ ವೇಳೆ, ಈ ಔಷಧ ಸೇವಿಸದ 158 ಮಂದಿಯ ಸಾವಿನ ದರ 11 ಶೇಕಡವಾಗಿದೆ ಎಂದು ವರದಿ ತಿಳಿಸಿದೆ.
113 ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಆ್ಯಂಟಿಬಯಾಟಿಕ್ ಅಝಿತ್ರೊಮೈಸಿನ್ ನೀಡಲಾಗಿದ್ದು, ಈ ಗುಂಪಿನ ಸಾವಿನ ದರ 22 ಶೇಕಡ ಆಗಿದೆ ಎಂದು ವರದಿ ಹೇಳಿದೆ.





