ಮೈಸೂರು ನಗರದ 12 ಬಡಾವಣೆಗಳು ಕಂಟೈನ್ಮೆಂಟ್ ಝೋನ್: ಜಿಲ್ಲಾಧಿಕಾರಿ ಆದೇಶ

ಸಾಂದರ್ಭಿಕ ಚಿತ್ರ
ಮೈಸೂರು,ಎ.22: ಜ್ಯಬಿಲಿಯಂಟ್ ಕಂಪನಿಯ ಕೊರೋನ ವೈರಸ್ ಸೋಂಕಿತರ ದ್ವಿತೀಯ ಸಂಪರ್ಕದವರಿಗೂ ಸೋಂಕು ದೃಢಪಟ್ಟ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಮೈಸೂರು ನಗರದಲ್ಲಿನ 12 ಬಡಾವಣೆಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶಿಸಿದ್ದಾರೆ.
ಕೊರೋನ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರೂ ಸೋಂಕಿತರೆಂದು ಗುರುತಿಸಿಕೊಂಡವರು ವಾಸಿಸುವ ಮನೆಯ 200 ಮೀಟರ್ ಸುತ್ತಳೆಯತನ್ನು ಬಂಧನ ವಲಯ (ಕಂಟೈನ್ಮೆಂಟ್ ಝೋನ್) ಆಗಿ ಗುರುತಿಸಲಾಗಿದೆ. ಮೀನಾ ಬಜಾರ್, ಸರ್ದಾರ್ ವಲ್ಲಭ ಬಾಯಿ ಪಟೇಲ್ ನಗರ, ಟೀಚರ್ಸ್ ಲೇ ಔಟ್, ಜನತಾ ನಗರ, ಹೌಸಿಂಗ್ ಬೋರ್ಡ್ ಕಾಲೋನಿ, ಕುವೆಂಪುನಗರ, ವಿಜಯನಗರ 2ನೇ ಹಂತ, ವಿಜಯನಗರ ಮೊದಲನೇ ಹಂತ, ಗೋಕುಲಂ, ಜಯಲಕ್ಷ್ಮಿಪುರಂ, ಶ್ರೀರಾಂಪುರ 2ನೇ ಹಂತ, ಜೆಪಿನಗರ, ನಜರ್ ಬಾದ್ ಇವುಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಿ ಬ್ಯಾರಿಕೇಡ್ ಹಾಕಿ ಪ್ರವೇಶ ನಿಷೇಧಿಸಲಾಗಿದೆ.
ಬಡಾವಣೆಯ ನಿವಾಸಿಗಳು ಹೊರಗೆ ಹೋಗುವಂತಿಲ್ಲ. ಹೊರಗಿನವರೂ ಕೂಡ ಬಡಾವಣೆಯೊಳಗೆ ಬರುವಂತಿಲ್ಲ. ದಿನನಿತ್ಯದ ಅವಶ್ಯಕತೆಗಳಿಗೆ ತೊಂದರೆ ಉಂಟಾಗದಂತೆ ತರಕಾರಿ, ದಿನಸಿ ಪದಾರ್ಥಗಳ ಪೂರೈಕೆಗೆ ಸಮೀಪದ ಸೂಪರ್ ಮಾರ್ಕೆಟ್, ಅಂಗಡಿಗಳ ನಂಬರ್ ನೀಡಿದ್ದು ದೂರವಾಣಿ ಕರೆ ಮಾಡಿ ಮನೆಗಳಿಗೆ ತರಿಸಿಕೊಳ್ಳಬಹುದು ಎಂದು ಡಿಸಿ ಹೇಳಿದ್ದಾರೆ.





