ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ: ಮೊಬೈಲ್ ರಿಚಾರ್ಜ್, ಶಾಲೆಗಳ ಪುಸ್ತಕದ ಅಂಗಡಿ ತೆರೆಯಲು ಅವಕಾಶ

ಹೊಸದಿಲ್ಲಿ, ಎ.22: ಮೇ 3ರಂದು ಅಂತ್ಯಗೊಳ್ಳುವ ಲಾಕ್‌ಡೌನ್‌ನಲ್ಲಿ ಕೇಂದ್ರ ಸರಕಾರ ಮತ್ತಷ್ಟು ವಿನಾಯಿತಿಯನ್ನು ಘೋಷಿಸಿದ್ದು ಶಾಲಾ ಕಾಲೇಜುಗಳ ಪುಸ್ತಕದ ಅಂಗಡಿ, ಪ್ರಿಪೇಡ್ ಮೊಬೈಲ್ ಫೋನ್‌ಗಳಿಗೆ ರಿಚಾರ್ಜ್ ಮಾಡುವ ಅಂಗಡಿ ಕಾರ್ಯಾರಂಭಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಿದೆ.
ಹಿರಿಯ ನಾಗರಿಕರನ್ನು ಮನೆಯಲ್ಲಿ ಅರೈಕೆ ಮಾಡುವ ದಾದಿಯರ ಸೇವೆಗೆ, ಇಲೆಕ್ಟ್ರಿಕ್ ಫ್ಯಾನ್ ಮಾರಾಟ ಅಂಗಡಿಗೆ , ನಗರ ಪ್ರದೇಶದಲ್ಲಿ ಬ್ರೆಡ್ ತಯಾರಿಸುವ ಫ್ಯಾಕ್ಟರಿಗಳು, ಹಾಲು ಸಂಸ್ಕರಿಸುವ ಘಟಕಗಳು ಮತ್ತು ಹಿಟ್ಟಿನ ಗಿರಣಿಗಳ ಕಾರ್ಯಾರಂಭಕ್ಕೆ ಅವಕಾಶವಿದೆ . ಅಗತ್ಯ ಸೇವೆಗಳಲ್ಲಿ ಮೊಬೈಲ್ ರಿಚಾರ್ಜ್ ಕೂಡಾ ಸೇರಿರುವುದರಿಂದ ಈ ವ್ಯವಹಾರ ಪುನರಾರಂಭಿಸಲು ಅವಕಾಶ ನೀಡಿದೆ ಎಂದು ಸರಕಾರ ತಿಳಿಸಿದೆ.
ಹಣ್ಣು, ತರಕಾರಿಗಳ ಪ್ಯಾಕಿಂಗ್ ಘಟಕ, ಬೀಜ ಮತ್ತು ತೋಟಗಾರಿಕಾ ಉತ್ಪನ್ನಗಳ ತಪಾಸಣೆ ಮತ್ತು ವ್ಯವಹಾರ ವ್ಯವಸ್ಥೆ, ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆ ನಿರ್ವಹಿಸುವ ಸಂಶೋಧನಾ ಸಂಸ್ಥೆಗಳನ್ನು ಲಾಕ್‌ಡೌನ್ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ. ನಾಟಿ ಮಾಡುವ ವಸ್ತುಗಳ , ಜೇನುಪೆಟ್ಟಿಗೆಗಳ ಅಂತರ್ ಮತ್ತು ಅಂತರ್‌ರಾಜ್ಯ ಸಂಚಾರ, ಜೇನು ಹಾಗೂ ಇತರ ಜೇನಿನ ಉತ್ಪನ್ನಗಳು, ಅರಣ್ಯ ತೋಟ ಮತ್ತಿತರ ಸಂಬಂಧಿತ ಚಟುವಟಿಕೆಗಳಿಗೆ ಅವಕಾಶವಿದೆ.
ಕೋವಿಡ್ ಹಾಟ್‌ಸ್ಪಾಟ್‌ಗಳಲ್ಲದ ಪ್ರದೇಶಗಳಲ್ಲಿರುವ ಭಾರತೀಯ ಬಂದರುಗಳಲ್ಲಿ ವ್ಯಾಪಾರಿ ಹಡಗಿನ ಸಿಬಂದಿಗಳ ನಿಯೋಜನೆ, ಕರ್ತವ್ಯದ ಬದಲಾವಣೆಗೆ ಸರಕಾರ ಅವಕಾಶ ನೀಡಿದೆ. ಆದರೆ ಈ ಎಲ್ಲಾ ಚಟುವಟಿಕೆಯ ಸಂದರ್ಭ ಸುರಕ್ಷಿತ ಅಂತರ, ಮಾಸ್ಕ್ ಧಾರಣೆ ಸಹಿತ ಎಲ್ಲಾ ಸುರಕ್ಷಿತ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದೆ.