ಕೊರೋನ ವೈರಸ್: 24 ಗಂಟೆಯಲ್ಲಿ 49 ಸಾವು
ದೇಶದಲ್ಲಿ 20,000 ಗಡಿ ದಾಟಿದ ಪ್ರಕರಣ

ಹೊಸದಿಲ್ಲಿ, ಎ.22: ದೇಶದಲ್ಲಿ ಬುಧವಾರ 1,486 ಹೊಸ ಪ್ರಕರಣ ದಾಖಲಾಗುವುದರೊಂದಿಗೆ ಕೊರೋನ ಸೋಂಕು ಪ್ರಕರಣ 20,471ಕ್ಕೇರಿದೆ. ಕಳೆದ 24 ಗಂಟೆಯಲ್ಲಿ ಸೋಂಕಿಗೆ ಮತ್ತೆ 49 ಜನ ಬಲಿಯಾಗಿದ್ದು ಸಾವನ್ನಪ್ಪಿದವರ ಸಂಖ್ಯೆ 652ಕ್ಕೇರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರೋಗದಿಂದ ಗುಣಮುಖರಾಗುತ್ತಿರುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಸೋಮವಾರ ಕೇಂದ್ರ ಸರಕಾರ ಹೇಳಿತ್ತು. ಬುಧವಾರ ಬೆಳಿಗ್ಗಿನವರೆಗಿನ ಮಾಹಿತಿಯಂತೆ ಗುಣಮುಖರಾಗುವ ಪ್ರಮಾಣ 19.36%ದಷ್ಟು ಇದೆ. ಬುಧವಾರ ಒಂದೇ ದಿನದಲ್ಲಿ 618 ರೋಗಿಗಳು ಗುಣಮುಖರಾಗಿದ್ದಾರೆ. ದೃಢೀಕೃತ ಪ್ರಕರಣ ನಿರಂತರ ಹೆಚ್ಚುತ್ತಿದ್ದರೂ, ಲಾಕ್‌ಡೌನ್‌ನ ಹಿನ್ನೆಲೆಯಲ್ಲಿ ರೋಗ ಪ್ರಸರಣದ ಪ್ರಮಾಣ ಇಳಿಮುಖವಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ದೇಶದಲ್ಲಿ 720 ಜಿಲ್ಲೆಗಳಿದ್ದು ಎಪ್ರಿಲ್ 2ರಂದು 211 ಜಿಲ್ಲೆಗಳಲ್ಲಿ ಸೋಂಕು ದೃಢಪಟ್ಟಿದ್ದರೆ, ಎಪ್ರಿಲ್ 22ರ ವೇಳೆಗೆ 403 ಜಿಲ್ಲೆಗಳಿಗೆ ಹರಡಿದೆ. ದೇಶದ ಒಟ್ಟು ಸೋಂಕು ಪ್ರಕರಣಗಳ 45% ಪ್ರಕರಣ 6 ಮಹಾನಗರಗಳಲ್ಲೇ ದಾಖಲಾಗಿದೆ. ಈ ಪಟ್ಟಿಯಲ್ಲಿ 3000 ಪ್ರಕರಣಗಳೊಂದಿಗೆ ಮುಂಬೈ ಅಗ್ರಸ್ಥಾನದಲ್ಲಿದ್ದು, ದಿಲ್ಲಿ 2,081, ಅಹ್ಮದಾಬಾದ್ 1,298, ಇಂದೋರ್ 915, ಪುಣೆ 660 ಮತ್ತು ಜೈಪುರ 537 ಆ ಬಳಿಕದ ಸ್ಥಾನದಲ್ಲಿವೆ. ದೇಶದ ಒಟ್ಟು ಪ್ರಕರಣದ 60% ಪ್ರಕರಣ ಮಹಾರಾಷ್ಟ್ರ, ಗುಜರಾತ್, ದಿಲ್ಲಿ, ರಾಜಸ್ತಾನ ಮತ್ತು ತಮಿಳುನಾಡು- ಈ ಐದು ರಾಜ್ಯಗಳಲ್ಲೇ ದಾಖಲಾಗಿದೆ.
ಕೊರೋನ ವೈರಸ್‌ನ ಅಸಮ ಹರಡುವಿಕೆಯಿಂದ ಕೆಂಪು, ಕಿತ್ತಳೆ, ಹಸಿರು ವಲಯಗಳನ್ನು ಗುರುತಿಸಲು ಅನುಕೂಲವಾಗಿದ್ದು ಅತೀ ಹೆಚ್ಚು ಬಾಧಿತ ಪ್ರದೇಶಗಳಿಗೆ ಅಧಿಕ ಗಮನ ಹರಿಸಲು ಮತ್ತು ಹಸಿರು ವಲಯದ ಪ್ರದೇಶಗಳಲ್ಲಿ ಲಾಕ್‌ಡೌನ್ ಸಡಿಲಿಸಲು ಸಾಧ್ಯವಾಗಿದೆ ಎಂದು ಸರಕಾರ ತಿಳಿಸಿದೆ.
ದೇಶದಲ್ಲಿ ಕೊರೋನ ಸೋಂಕು ದ್ವಿಗುಣಗೊಳ್ಳುವ ಪ್ರಮಾಣ ಈಗ ಇಳಿಮುಖವಾಗಿದೆ. ್ದ ಲಾಕ್‌ಡೌನ್ ಜಾರಿಯ ಮುನ್ನ , ಪ್ರತೀ 3.4 ದಿನಕ್ಕೆ ಕೊರೋನ ಸೋಂಕಿನ ಪ್ರಮಾಣ ದ್ವಿಗುಣಗೊಳ್ಳುತ್ತಿದ್ದರೆ ಈಗ ಪ್ರತೀ 7.5 ದಿನಕ್ಕೆ ದ್ವಿಗುಣಗೊಳ್ಳುತ್ತಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್ ಸೋಮವಾರ ಹೇಳಿದ್ದರು.







