ಕಾಂಗ್ರೆಸ್ ನೀಡಿದ ಸಲಹೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ : ಸೋನಿಯಾ ಗಾಂಧಿ

ಹೊಸದಿಲ್ಲಿ, ಎ.18: ಕೋವಿಡ್ -19 ಬಿಕ್ಕಟ್ಟನ್ನು ನಿಭಾಯಿಸಲು ಕಾಂಗ್ರೆಸ್ ಸರಕಾರಕ್ಕೆ ನೀಡಿದ ಸಲಹೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಗಾಂಧಿ ಕೇಂದ್ರ ಸರ್ಕಾರದ ಅಚಾತುರ್ಯವು ಎದ್ದು ಕಾಣುತ್ತದೆ ಎಂದರು.
ಸಮಾಜದ ಕೆಲವು ವರ್ಗಗಳಾದ ಕೃಷಿ ಕಾರ್ಮಿಕರು, ವಲಸೆ ಕಾರ್ಮಿಕರು, ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿತ ವಲಯದಲ್ಲಿರುವವರು ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು. "ವ್ಯಾಪಾರ, ವಾಣಿಜ್ಯ ಮತ್ತು ಉದ್ಯಮವು ವಾಸ್ತವಿಕವಾಗಿ ಸ್ಥಗಿತಗೊಂಡಿದೆ ಮತ್ತು ಕೋಟ್ಯಂತರ ಮಂದಿಯ ಬದುಕಿಗೆ ತೊಂದರೆಯಾಗಿದೆ."
“ದುರದೃಷ್ಟವಶಾತ್, ಪರೀಕ್ಷೆ ಇನ್ನೂ ನಿಧಾನವಾಗಿದೆ ಮತ್ತು ಪರೀಕ್ಷಾ ಕಿಟ್‌ಗಳು ಇನ್ನೂ ಕಡಿಮೆ ಪೂರೈಕೆಯಲ್ಲಿವೆ ಮತ್ತು ಕಳಪೆ ಗುಣಮಟ್ಟದಲ್ಲಿವೆ. ಪಿಪಿಇ ಕಿಟ್‌ಗಳ ಸಂಖ್ಯೆ ಮತ್ತು ಗುಣಮಟ್ಟ ಕಳಪೆಯಾಗಿದೆ, ”ಎಂದು ಅವರು ಹೇಳಿದರು.
ಕೊರೋನ ವೈರಸ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಕಾಂಗ್ರೆಸ್ ಅಧ್ಯಕ್ಷರು ಮಾರ್ಚ್ 23 ರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸರಣಿ ಪತ್ರಗಳನ್ನು ಬರೆದಿದ್ದಾರೆ.





