ಒಂದು ಗುಂಪಿನ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸುವುದು ಸರಿಯಲ್ಲ: ಕೇಂದ್ರ ಸಚಿವ ನಖ್ವಿ

ಹೊಸದಿಲ್ಲಿ: ದಿಲ್ಲಿಯಲ್ಲಿ ತಬ್ಲೀಗಿ ಜಮಾತ್ ಕಾರ್ಯಕ್ರಮ ನಡೆದ ನಂತರ ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವುದಕ್ಕೆ ಮುಸ್ಲಿಮರನ್ನು ದೂಷಿಸುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಒಂದು ಗುಂಪಿನ ‘ಅಪರಾಧ'ಕ್ಕೆ ಇಡೀ ಸಮುದಾಯವನ್ನು ಹೊಣೆಯಾಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.
“ಆ ಸಂಘಟನೆ ಏನೇ ಮಾಡಿರಬಹುದು, ಕ್ರಿಮಿನಲ್ ನಿರ್ಲಕ್ಷ್ಯ ಅಥವಾ ಅಪರಾಧ, ಹೆಚ್ಚಿನ ಮುಸ್ಲಿಮರು ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ ಹಾಗೂ ಖಂಡಿಸಿದ್ದಾರೆ ಮತ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಒಬ್ಬ ವ್ಯಕ್ತಿ ಯಾ ಸಂಘಟನೆ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಲು ಸಾಧ್ಯವಿಲ್ಲ'' ಎಂದು ಅವರು ಹೇಳಿದ್ದಾರೆ. ಇಂತಹ ಚಿಂತನೆ ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಎಂದರು.
“ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿರುವವರು ಕೆಲವೇ ಕೆಲವು ಪ್ರತ್ಯೇಕಿತ ವ್ಯಕ್ತಿಗಳಾಗಿದ್ದು ಇವರು ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ನಾವು ಜತೆಯಾಗಬೇಕಿದೆ ಹಾಗೂ ಅವುಗಳನ್ನು ದೂರಗೊಳಿಸಬೇಕಿದೆ'' ಎಂದು ಅವರು ಹೇಳಿದರು.