ಕೊರೋನ ಸೋಂಕಿತನ ಮಾಹಿತಿ ನೀಡದ ಆರೋಪ: ಹೆಲ್ತ್ ಕೇರ್ ಸೆಂಟರ್ ಲೈಸನ್ಸ್ ರದ್ದು
ಬೆಂಗಳೂರು, ಎ.23: ಕೊರೋನ ವೈರಸ್ ಸೋಂಕಿತನ ಬಗ್ಗೆ ಮಾಹಿತಿ ನೀಡದ ನಗರದ ಹೆಲ್ತ್‍ಕೇರ್ ಸೆಂಟರ್ ಒಂದರ ಲೈಸನ್ಸ್ ರದ್ದು ಪಡಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್ ಶಿವಮೂರ್ತಿ ಆದೇಶ ಹೊರಡಿಸಿದ್ದಾರೆ.
ನಗರದ ವೇಣು ಸೆಂಟರ್‍ನಲ್ಲಿ ಎ.18ರಂದು ಚಿಕಿತ್ಸೆ ಪಡೆದಿದ್ದ ರೋಗಿಗೆ ಕೊರೋನ ವೈರಸ್ ಸೋಂಕು ಕಂಡು ಬಂದಿತ್ತು. ಆದರೆ, ಸೋಂಕಿತ ವ್ಯಕ್ತಿಯನ್ನು ಕ್ವಾರಂಟೈನ್‍ಗೂ ಒಳಪಡಿಸಿರಲಿಲ್ಲ. ಅಲ್ಲದೇ, ಆರೋಗ್ಯ ಇಲಾಖೆಯ ಗಮನಕ್ಕೂ ತಂದಿರಲಿಲ್ಲ. ಅಷ್ಟಲ್ಲದೇ, ಅಂದಿನಿಂದ ಬುಧವಾರದವರೆಗೂ ಕ್ಲಿನಿಕ್ ಓಪನ್ ಮಾಡಿಕೊಂಡು ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಕ್ಲಿನಿಕ್‍ನ ಸಿಬ್ಬಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲು ಬಂದ ಬಿಬಿಎಂಪಿ ಅಧಿಕಾರಿಗಳ ಮೇಲೆ ರಂಪಾಟ ನಡೆಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಲಿನಿಕ್ ಅನುಮತಿ ರದ್ದುಪಡಿಸಿ ಆಸ್ಪತ್ರೆಯನ್ನು ಸೀಝ್ ಮಾಡುವಂತೆ ಬೆಂಗಳೂರು ಜಿಲ್ಲಾಧಿಕಾರಿ ಶಿವಮೂರ್ತಿ ಆದೇಶಿಸಿದ್ದಾರೆ.
ನಗರದಲ್ಲಿ ಬುಧವಾರ ಕೊರೋನ ಸೋಂಕು ಪತ್ತೆಯಾದ ಹೊಗಸಂದ್ರದ ರೋಗಿ ನಂ:419, ಎ.18ರಂದು ಹೊಗಸಂದ್ರದ ಹೆಲ್ತ್‍ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆದಿದ್ದ. ಉಸಿರಾಟದ ಸಮಸ್ಯೆ ಹಾಗೂ ಕೆಮ್ಮು, ಜ್ವರ ಅಂತ ಒಂದು ದಿನ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ. ಬಳಿಕ ರಾಜೀವ್‍ಗಾಂಧಿ ಆಸ್ಪತ್ರೆಯಲ್ಲಿ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಡಾಕ್ಟರ್ ಸೇರಿದಂತೆ ಮೂರು ಜನ ನರ್ಸ್‍ಗಳನ್ನು ಸಂಬಂಧಪಟ್ಟ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಸದ್ಯ 21 ಪ್ರೈಮರಿ ಕಾಂಟ್ಯಾಕ್ಟ್, 23 ಸೆಕೆಂಡರಿ ಕಾಂಟ್ಯಾಕ್ಟ್‍ಗಳನ್ನು ಕ್ವಾರಂಟೈನ್ ಮಾಡಲಾಗಿದೆ.







