ಹಸಿರು ವಲಯ ಘೋಷಣೆ ಬಳಿಕ ಉಡುಪಿ ಜಿಲ್ಲೆಯಲ್ಲಿ ನಿರ್ಬಂಧ ಸಡಿಲಿಕೆಗೆ ಕ್ರಮ : ಸಚಿವ ಬೊಮ್ಮಾಯಿ

ಉಡುಪಿ, ಎ.23: ಕೋವಿಡ್-19 ಮುಕ್ತವಾಗಿರುವ ಉಡುಪಿ ಜಿಲ್ಲೆಯು ಇನ್ನು ಮೂರು ದಿನಗಳಲ್ಲಿ ಕೇಸರಿ ವಲಯದಿಂದ ಹಸಿರು ವಲಯಕ್ಕೆ ಸೇರ್ಪಡೆ ಗೊಳ್ಳಲಿದೆ. ಆ ಬಳಿಕ ರಾಜ್ಯದ 11 ಹಸಿರು ವಲಯ ಜಿಲ್ಲೆಗಳಂತೆ ಉಡುಪಿ ಜಿಲ್ಲೆಯಲ್ಲೂ ನಿರ್ಬಂಧ ಸಡಿಲಿಕೆಗೆ ರಾಜ್ಯ ಸರಕಾರದ ಅನುಮತಿಯಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಗೃಹ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಕೋವಿಡ್-19 ನಿಯಂತ್ರಣ ಕುರಿತ ಸಭೆಯಲ್ಲಿ ತೆಗೆದು ಕೊಂಡ ನಿರ್ಣಯದ ಬಗ್ಗೆ, ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕನಿಷ್ಟ 50 ಮತ್ತು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 5-10 ಬೆಡ್‌ಗಳಿಗೆ ಕೇಂದ್ರಿಕೃತ ಆಮ್ಲಜನಕ (ಸೆಂಟ್ರಲೈಸಡ್ ಆಕ್ಸಿಜನ್) ಪೂರೈಕೆ ವ್ಯವಸ್ಥೆಯನ್ನು ಮಾಡಲಾಗುವುದು. ಇದರಿಂದ ಕೋವಿಡ್ ರೋಗಿಗಳಿಗೆ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಲು ಸಹಕಾರಿ ಯಾಗುತ್ತದೆ. ಅದರ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.
ಜಿಲ್ಲೆಗೆ ಅತ್ಯಂತ ಅವಶ್ಯಕವಾಗಿರುವ 3500 ಕೋವಿಡ್ ಪಿಪಿಇ ಕಿಟ್‌ಗಳನ್ನು ತುರ್ತಾಗಿ ತರಿಸುವ ಕೆಲಸ ಮಾಡಲಾಗುವುದು. ನಮ್ಮ ಸಂಗ್ರಹದಲ್ಲಿ ಈಗ ಎಚ್‌ಐವಿ ಪಿಪಿಇ ಕಿಟ್‌ಗಳಿದ್ದು, ಅಂತಹ ಕಿಟ್‌ಗಳನ್ನು ಪ್ರತ್ಯೇಕವಾಗಿರಿಸಿ ಕೂಡಲೇ ವಾಪಾಸ್ಸು ಕಳುಹಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಲಿದೆ ಎಂದು ಅವರು ತಿಳಿಸಿದರು.
ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಬರುವವರಿಗೆ ನಿರ್ಬಂಧ ವಿಧಿಸಲಾಗಿದ್ದು, ತಮ್ಮ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಐದಕ್ಕಿಂತ ಹೆಚ್ಚು ಜನರಿಗೆ ಪ್ರವೇಶ ನೀಡಬಾರದು ಮತ್ತು ತುರ್ತು ಚಿಕಿತ್ಸೆಗೆ ಪ್ರವೇಶ ಕಲ್ಪಿಸಬೇಕು. ಉಳಿದಂತೆ ಯಾವುದೇ ಪಾಸ್ ಇದ್ದರೂ ಯಾರನ್ನು ಕೂಡ ಒಳಗೆ ಬಿಡದಂತೆ ನಿರ್ಣಯ ಮಾಡಲಾಗಿದೆ ಎಂದರು.
ಈಗಾಗಲೇ ಮೀನುಗಾರಿಕೆ ಅನುಮತಿಯನ್ನು ನೀಡಲಾಗಿದ್ದು, ಇದರಲ್ಲಿರುವ ಕೆಲವು ತೊಂದರೆಗಳನ್ನು ನಿವಾರಣೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಂದಿನ ಸಭೆಯಲ್ಲಿ ತೆಗೆದುಕೊಂಡ ಎಲ್ಲ ನಿರ್ಣಯ ಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಮಂಗಳೂರು ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ, ಎಸ್ಪಿ ವಿಷ್ಣುವರ್ಧನ್, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಸುಕುಮಾರ್ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್.ಮೆಂಡನ್ ಮೊದಲಾದವರು ಹಾಜರಿದ್ದರು.
ಜಿಲ್ಲಾಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪನೆ
ಜಿಲ್ಲೆಗೆ ಅತ್ಯಂತ ಅವಶ್ಯಕವಾಗಿರುವ ಕೋವಿಡ್ ಪರೀಕ್ಷಾ ಪ್ರಯೋಗಾಲಯ ವನ್ನು ಎಸ್‌ಡಿಆರ್ ನಿಧಿಯಿಂದ ಶೀಘ್ರವೇ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿ ಸಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯದಲ್ಲಿ ಈಗಾಗಲೇ 17 ಪರೀಕ್ಷಾ ಪ್ರಯೋಗಾಲಯಗಳು ಕಾರ್ಯಾಚರಿಸುತ್ತಿದ್ದು, ಎ.30ರೊಳಗೆ ಮತ್ತೆ 10 ಪರೀಕ್ಷಾ ಪ್ರಯೋಗಾಲಯಗಳು ಪ್ರಾರಂಭವಾಗಲಿದೆ. ಈ ಮೂಲಕ ಒಟ್ಟು 27 ಪ್ರಯೋಗಾಲಯಗಳು ರಾಜ್ಯ ದಲ್ಲಿ ಕಾರ್ಯನಿರ್ವಹಿಸಲಿವೆ ಎಂದರು.
3 ತಿಂಗಳ ನಂತರ ಜಿಲ್ಲೆಗೆ ಆಗಮಿಸಿದ ಸಚಿವರು !
ಜ.26ರ ಗಣರಾಜ್ಯೋತ್ಸವ ದಿನದಂದು ಜಿಲ್ಲೆಗೆ ಆಗಮಿಸಿ ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಇದೀಗ ಸುಮಾರು ಮೂರು ತಿಂಗಳ ನಂತರ ಜಿಲ್ಲೆಗೆ ಆಗಮಿಸಿದ್ದಾರೆ.
ಕೊರೋನ ಭೀತಿಯ ವಾತಾವರಣ ಹಾಗೂ ಲಾಕ್‌ಡೌನ್ ಜಾರಿಯಾಗಿ ಸುಮಾರು ಒಂದು ತಿಂಗಳ ನಂತರ ಸಚಿವರು ಜಿಲ್ಲೆಗೆ ಆಗಮಿಸಿ ಕೋವಿಡ್ ನಿಯಂತ್ರಣದ ಬಗ್ಗೆ ಸಭೆ ನಡೆಸಿದರು. ಜಿಲ್ಲೆಯಲ್ಲಿ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದ ಗಂಭೀರ ಸಂದರ್ಭದಲ್ಲೂ ಸಚಿವರು ಜಿಲ್ಲೆಗೆ ಆಗಮಿಸದ ಬಗ್ಗೆ ಆ ಸಮಯದಲ್ಲಿ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿದ್ದವು.
ಜಿಲ್ಲಾ ಉಸ್ತುವಾರಿಗಳು ಆಯಾ ಜಿಲ್ಲೆಗಳಿಗೆ ತೆರಳಿ ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿದ ಸಭೆಯಲ್ಲಿ ಭಾಗಿಯಾಗಬೇಕೆಂಬ ನಿಯಮ ಇದ್ದರೂ ಬಸವರಾಜ ಬೊಮ್ಮಾಯಿ ಮಾತ್ರ ನಾಪತ್ತೆಯಾಗಿದ್ದರು. ಇದೀಗ ಜಿಲ್ಲೆ ಕೊರೋನ ಮುಕ್ತವಾಗಿರುವ ಸಂದರ್ಭದಲ್ಲಿ, ಅದು ಕೂಡ ಸದ್ಯದಲ್ಲೇ ಹಸಿರು ವಲಯಕ್ಕೆ ಸೇರ್ಪಡೆಯಾಗುವ ಸಮಯದಲ್ಲಿ ಸಚಿವರು ಆಗಮಿಸಿ ಸಭೆ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.








