ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣ: ಗ್ರಾಮದ ಜನತೆಯ ಆರೋಗ್ಯದಲ್ಲಿ ಏರುಪೇರು
ಬೆಳಗಾವಿ, ಎ.23: ಕುಡಿಯುವ ನೀರು ಸರಬರಾಜಿನ ಪ್ಲಾಸ್ಟಿಕ್ ಪೈಪ್‍ಲೈನ್‍ಗಳನ್ನು ರಸ್ತೆಯ ಬದಿಗಿರುವ ಮೋರಿಯಲ್ಲಿ ಅಳವಡಿಸಲಾಗಿದ್ದು, ಇದರಿಂದ, ಚರಂಡಿ ನೀರು ಪ್ಲಾಸ್ಟಿಕ್ ಪೈಪ್‍ಗಳಲ್ಲಿ ಸೇರಿ ಜನರೂ ಇದೇ ನೀರನ್ನು ಕುಡಿಯುವಂತಹ ಪರಿಸ್ಥಿತಿ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಉಂಟಾಗಿದೆ.
ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಪೈಪ್ ಎರಡು-ಮೂರು ಕಡೆಗಳಲ್ಲಿ ಒಡೆದು ಹೋಗಿದ್ದು, ಗ್ರಾಮದ ಜನತೆ ಅದೇ ನೀರನ್ನು ಕುಡಿಯುವ ಪರಿಸ್ಥಿತಿ ಒದಗಿ ಬಂದಿದೆ. ಇದರಿಂದ, ಜನರಲ್ಲಿ ಜ್ವರ, ನೆಗಡಿ, ಕೆಮ್ಮುನಂತಹ ಅನಾರೋಗ್ಯಗಳು ಕಾಡುತ್ತಿವೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೊರಗೆ ಬಂದು ಪ್ರತಿಭಟಿಸೋಣ ಎಂದರೆ ಲಾಕ್‍ಡೌನ್ ಇರುವ ಕಾರಣ ಹೊರ ಬರಲು ಆಗುತ್ತಿಲ್ಲ. ಅನಿವಾರ್ಯವಾಗಿ ಅದೇ ನೀರನ್ನು ಕುಡಿಯುವ ದುಸ್ಥಿತಿ ನಮ್ಮದಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಕುಡಿಯುವ ನೀರು ಸರಬರಾಜಿಗೆ ಪ್ಲಾಸ್ಟಿಕ್ ಪೈಪ್‍ಲೈನ್ ಅಳವಡಿಸಲಾಗಿದ್ದು, ಭೂಮಿಯ ಒಳಗೆ ಅಳವಡಿಸಬೇಕಾದ ಪೈಪ್‍ನ್ನು ರಸ್ತೆಯ ಬದಿಗಿರುವ ಮೋರಿಯಲ್ಲಿ ಅಳವಡಿಸಿದ್ದರಿಂದ, ಪೈಪ್‍ಗಳು ಒಡೆದು ಹೋಗಿವೆ. ಕುಡಿಯುವ ನೀರಿನ ಪೈಪ್ ಮೋರಿಯಲ್ಲಿ ಹಾದುಹೋಗಿರುವ ಪರಿಣಾಮ ಚರಂಡಿಯಲ್ಲಿ ಹರಿಯುವ ನೀರು ಕುಡಿಯುವ ನೀರಿನಲ್ಲಿ ಮಿಶ್ರಣಗೊಳ್ಳುತ್ತಿದೆ.







