ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರ್ಖಂಡ್‌ನ ಮಾಜಿ ಸಚಿವನಿಗೆ ಏಳು ವರ್ಷ ಜೈಲುಶಿಕ್ಷೆ

ರಾಂಚಿ, ಎ.23: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್‌ನ ಮಾಜಿ ಸಚಿವ ಅನೋಶ್ ಎಕ್ಕಾ ಅವರಿಗೆ ಸ್ಥಳೀಯ ನ್ಯಾಯಾಲಯವು ಗುರುವಾರ ಏಳು ವರ್ಷಗಳ ಜೈಲುಶಿಕ್ಷೆ ಮತ್ತು ಎರಡು ಕೋಟಿ ರೂ.ದಂಡವನ್ನು ವಿಧಿಸಿದೆ ಎಂದು ಜಾರಿ ನಿರ್ದೇಶನಾಲಯ (ಈ.ಡಿ)ವು ತಿಳಿಸಿದೆ.
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಕಾರನ್ನು ಈ.ಡಿ.ತನಿಖೆಗೊಳಪಡಿಸಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ 20,31,77,852 ರೂ.ಗಳ ಅಕ್ರಮ ಹಣ ವರ್ಗಾವಣೆಯಲ್ಲಿ ಎಕ್ಕಾ ತಪ್ಪಿತಸ್ಥ ಎಂದು ನ್ಯಾಯಾಲಯವು ಘೋಷಿಸಿದೆ ಎಂದು ಈ.ಡಿ.ಹೇಳಿಕೆಯಲ್ಲಿ ತಿಳಿಸಿದೆ. ಎಕ್ಕಾ ಅವರ ಎಲ್ಲ ಆಸ್ತಿಗಳನ್ನು ಜಫ್ತಿ ಮಾಡಲಾಗಿದೆ. ಕೆಲವು ಆಸ್ತಿಗಳ ಮೇಲೆ ಹಕ್ಕು ಮಂಡಿಸಿದ್ದ ಎರಡು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಕೋಡಾ ಅವರ ಸಂಪುಟದಲ್ಲಿ 2006ರಿಂದ 2008ರವರೆಗೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಕ್ಕಾ ಮತ್ತು ಅವರ ಪತ್ನಿ ಈ ಅವಧಿಯಲ್ಲಿ 17 ಕೋ.ರೂ.ವೌಲ್ಯದ ಅಕ್ರಮ ಸಂಪತ್ತನ್ನು ಗಳಿಸಿದ್ದರು ಎಂದು ಆರೋಪಿಸಿದ್ದ ಈ.ಡಿ., 2014ರಲ್ಲಿ ಅವರಿಗೆ ಸಂಬಂಧಿಸಿದ್ದ 100 ಕೋ.ರೂ.ವೌಲ್ಯದ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡಿತ್ತು.
ಎಕ್ಕಾ ಕೋಡಾಗೆ ಸಂಬಂಧಿಸಿದ ಪ್ರಕರಣದಲ್ಲಿ ದೋಷಿಯೆಂದು ಘೋಷಿಸಲ್ಪಟ್ಟಿರುವ ಎರಡನೇ ಸಚಿವರಾಗಿದ್ದಾರೆ. 2017ರಲ್ಲಿ ರಾಂಚಿಯ ವಿಶೇಷ ನ್ಯಾಯಾಲಯವು ಮಾಜಿ ಜಾರ್ಖಂಡ್ ಸಚಿವ ಹರಿನಾರಾಯಣ ರಾಯ್ ಅವರಿಗೆ ಏಳು ವರ್ಷಗಳ ಜೈಲುಶಿಕ್ಷೆ ಮತ್ತು ಐದು ಲ.ರೂ.ಗಳ ದಂಡವನ್ನು ವಿಧಿಸಿತ್ತು.







