ಕೊರೋನ /ಲಾಕ್‌ಡೌನ್ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಲು ತಾಪಂಗಳಿಗೆ ಸಚಿವರ ಸೂಚನೆ
ಮಂಗಳೂರು, ಎ.23: ಕೊರೋನ ನಿರ್ವಹಣೆಗೆ ಹಾಗೂ ಲಾಕ್‌ಡೌನ್ ಯಶಸ್ವಿಗೆ ತಾಪಂಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ದ.ಕ.ಜಿಪಂನಲ್ಲಿ ಗುರುವಾರ ವೀಡಿಯೋ ಕಾನ್ಫೆರೆನ್ಸ್ ಮೂಲಕ ಜಿಲ್ಲೆಯ ತಾಪಂ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಸ್ಥಳೀಯಾಡಳಿತ ಸಂಸ್ಥೆಗಳು ಕೊರೋನ ನಿರ್ವಹಣೆಗೆ ತೊಡಗಿಸಿಕೊಳ್ಳಬೇಕು. ಗ್ರಾಪಂಗಳು ಜನರ ಮಧ್ಯೆ ಇರುವುದರಿಂದ ಅಲ್ಲಿನ ಶಂಕಿತ ರೋಗಿಗಳ ಹಾಗೂ ಕೊರೋನ ಪೀಡಿತರ ಜನರ ಎಲ್ಲಾ ಮಾಹಿತಿ ಇದ್ದು, ಜಾಗೃತಾವಸ್ಥೆಯಲ್ಲಿ ಕೆಲಸ ಮಾಡಿದರೆ ಕೊರೋನ ನಿಯಂತ್ರಣ ಸಾಧ್ಯ. ಈ ಹಿನ್ನೆಲೆಯಲ್ಲಿ ತಾಪಂ ಹಾಗೂ ಗ್ರಾಪಂ ಪ್ರತಿನಿಧಿಗಳು ಶ್ರಮ ವಹಿಸಿ ದುಡಿಯಬೇಕು ಎಂದು ಸಚಿವರು ತಿಳಿಸಿದರು.
ಈ ಸಂದರ್ಭ ಚರ್ಚೆಯ ನಂತರ 14ನೇ ಹಣಕಾಸಿನ ಅನುದಾನದಲ್ಲಿ ಕೊರೋನ ನಿಯಂತ್ರಣಕ್ಕೆ ಬೇಕಾದ ಯೋಜನೆ ರೂಪಿಸಲು ಸರಕಾರದ ಅನುಮತಿ ಸೇರಿದಂತೆ, ಕೊರೋನ ಜಾಗೃತಿಗೆ ಪ್ರತೀ ಗ್ರಾಪಂಗೆ 20 ಸಾವಿರ ರೂ.ನಂತೆ ಅನುದಾನ ನೀಡಲಾಗಿದೆ ಎಂದ ಸಚಿವರು ಮಳೆಗಾಲದಲ್ಲಿ ಬರಬಹುದಾದ ಡೆಂಗ್, ಮಲೇರಿಯಾ, ಇಲಿಜ್ವರ ಮತ್ತಿತರ ಕಾಯಿಲೆಗಳ ಬಗ್ಗೆ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಅಪಾರ್ಟ್‌ಮೆಂಟ್‌ಗಳ ಮೂಲಸೌಕರ್ಯ ಸಮೀಕ್ಷೆಗೆ ಸೂಚನೆ : ಜಿಲ್ಲಾದ್ಯಂತ ಇರುವ ಎಲ್ಲಾ ವಸತಿ ಸಮುಚ್ಚಯಗಳ ಕೊಳಚೆ ನೀರು ತೆರದ ಚರಂಡಿಯಲ್ಲೇ ಹರಿದು ಸ್ಥಳಿಯರ ಬಾವಿ ಹಾಳಾಗಿದ್ದು, ರೋಗಗಳು ಬರುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ತಕ್ಷಣ ಸಮೀಕ್ಷೆ ನಡೆಸಿ, ಜಿಲ್ಲೆಯಾದ್ಯಂತ ಇರುವ ವಸತಿ ಸಮುಚ್ಚಯಗಳ ಮೂಲಭೂತ ಸಮೀಕ್ಷೆಗಳ ಹೇಗೆ ಇದೆ ಎಂಬುದರ ಬಗ್ಗೆ ವರದಿ ನೀಡಲು ಸಚಿವರು ಸೂಚಿಸಿದರು.
ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ತಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಇಒಗಳು, ತಾಲೂಕು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಮತ್ತಿತರರು ಉಪಸ್ಥಿತರಿದ್ದರು.







