ವಿಶ್ವ ಆರೋಗ್ಯ ಸಂಸ್ಥೆಗೆ ಹೆಚ್ಚುವರಿ 228 ಕೋಟಿ ರೂ.: ಚೀನಾ ಘೋಷಣೆ

ಬೀಜಿಂಗ್, ಎ. 23: ಕೊರೋನವೈರಸ್ ಸಾಂಕ್ರಾಮಿಕದ ವಿರುದ್ಧದ ಜಾಗತಿಕ ಹೋರಾಟದಲ್ಲಿ ನೆರವಾಗುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಹೆಚ್ಚುವರಿಯಾಗಿ 30 ಮಿಲಿಯ ಡಾಲರ್ (ಸುಮಾರು 228 ಕೋಟಿ ರೂಪಾಯಿ) ದೇಣಿಗೆ ನೀಡುವುದಾಗಿ ಚೀನಾ ಗುರುವಾರ ಪ್ರಕಟಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ಪರ ಧೋರಣೆ ತಳೆದಿರುವುದಕ್ಕಾಗಿ ಅದಕ್ಕೆ ಅಮೆರಿಕ ನೀಡುವ ದೇಣಿಗೆಯನ್ನು ತಡೆಹಿಡಿಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಹಲವು ದಿನಗಳ ಬಳಿಕ ಚೀನಾ ಈ ನಿರ್ಧಾರವನ್ನು ತೆಗೆದುಕೊಂಡಿದೆ.
‘‘ಕೋವಿಡ್-19 ವಿರುದ್ಧದ ಹೋರಾಟವನ್ನು ಬೆಂಬಲಿಸಲು ಹಾಗೂ ಅಭಿವೃದ್ಧಿಶೀಲ ದೇಶಗಳ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ವಿಶ್ವ ಆರೋಗ್ಯ ಸಂಸ್ಥೆಗೆ ಈಗಾಗಲೇ ನೀಡಲಾಗಿರುವ 20 ಮಿಲಿಯ ಡಾಲರ್ (ಸುಮಾರು 152 ಕೋಟಿ ರೂಪಾಯಿ) ದೇಣಿಗೆಗೆ ಹೆಚ್ಚುವರಿಯಾಗಿ ಇನ್ನೂ 30 ಮಿಲಿಯ ಡಾಲರ್ ನೀಡಲು ಚೀನಾ ನಿರ್ಧರಿಸಿದೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Next Story





