ಸ್ಥಳೀಯರು ಒಪ್ಪದೆ ಕೊರೋನ ಸೋಂಕಿತರ ಶವ ಸಂಸ್ಕಾರ ಬೇಡ: ಶಾಸಕ ಡಾ. ಭರತ್ ಶೆಟ್ಟಿ
ಪಚ್ಚನಾಡಿ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಸ್ಥಳೀಯರ ವಿರೋಧ

ಮಂಗಳೂರು : ಪಚ್ಚನಾಡಿ ಸ್ಮಶಾನದಲ್ಲಿ ಕೊರೋನ ವೈರಸ್ ನಿಂದ ಮೃತರ ಶವ ಸಂಸ್ಕಾರ ಮಾಡಲು ಸ್ಥಳೀಯರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಒಪ್ಪದೆ ಕೊರೋನ ಸೋಂಕಿತರ ಶವ ಸಂಸ್ಕಾರ ಬೇಡ ಎಂದು ಶಾಸಕ ಡಾ. ಭರತ್ ಶೆಟ್ಟಿ ತಿಳಿಸಿದ್ದಾರೆ.
ಕೋರೋನಾ ಸೋಂಕಿತ ವೃದ್ದೆಯ ಮೃತದೇಹವನ್ನು ವಾಮಂಜೂರಿನ ರುದ್ರಭೂಮಿಯಲ್ಲಿ ಸಂಸ್ಕಾರ ಮಾಡಲು ಇಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು. ವಾಮಂಜೂರು ರುದ್ರಭೂಮಿಗೆ ಮೃತದೇಹವನ್ನು ತರುತ್ತಾರೆ ಎನ್ನುವ ಮಾಹಿತಿ ಮೇರೆಗೆ ಸ್ಥಳೀಯ ನೂರಕ್ಕಿಂತಲೂ ಅಧಿಕ ಮಂದಿ ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು.
ವಿಷಯ ತಿಳಿದು ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವಾಮಂಜೂರಿಗೆ ಭೇಟಿ ನೀಡಿ, ಇಲ್ಲಿ ಮೃತರ ಅಂತ್ಯಕ್ರಿಯೆ ಮಾಡುವ ಬಗ್ಗೆ ನನಗೆ ಯಾರೂ ಮಾಹಿತಿ ನೀಡಿಲ್ಲ. ಇಲ್ಲಿನ ಜನತೆ ವಿರೋಧ ವ್ಯಕ್ತಪಡಿಸಿರುವುದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಇಲ್ಲಿನ ಜನರು ಯಾರು ಕೂಡ ಈ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿ ಎಲ್ಲರನ್ನೂ ಮನೆಗಳಿಗೆ ತೆರಳಲು ಸೂಚಿಸಿರುವುದಾಗಿ ಹೇಳಿದರು.
ಅಂತ್ಯಕ್ರಿಯೆಯ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ ಎಂದು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು ತಿಳಿಸಿದ್ದಾರೆ.







