ಚಿಕ್ಕಮಗಳೂರು: ವಲಸೆ ಕಾರ್ಮಿಕರನ್ನು ಎಸ್ಟೇಟ್‍ನಿಂದ ಹೊರ ಹಾಕಿದ ಮಾಲಕ; ಆರೋಪ
ಅಕ್ರಮವಾಗಿ ಪಿಕ್‍ಅಪ್ ವಾಹನದಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದ 33 ಮಂದಿ ವಶಕ್ಕೆ
ಚಿಕ್ಕಮಗಳೂರು, ಎ.22: ಕೋವಿಡ್-19 ಸಂಬಂಧ ಜಾರಿಯಲ್ಲಿರುವ ಲಾಕ್‍ಡೌನ್ ನಿರ್ಬಂಧಗಳಿಂದಾಗಿ ವಲಸೆ ಕಾರ್ಮಿಕರ ಗೋಳು ಕೇಳುವವರಿಲ್ಲ ಎಂಬಂತಾಗಿದ್ದು, ಇತ್ತೀಚೆಗೆ ಬೇಲೂರಿನಲ್ಲಿ ಕಾಫಿ ಎಸ್ಟೇಟ್ ಮಾಲಕನೊಬ್ಬ ಕೂಲಿ ಕೆಲಸಕ್ಕೆ ಆಗಮಿಸಿದ್ದ ಕಾರ್ಮಿಕರಿಗೆ ಕೆಲಸ, ಆಶ್ರಯ ನೀಡದೇ ತೋಟದಿಂದ ಹೊರ ಹಾಕಿದ್ದ ಘಟನೆ ಬೆನ್ನಲ್ಲೇ ಸಕಲೇಶಪುರದ ಎಸ್ಟೇಟ್ ಮಾಲಕನೊಬ್ಬ ವಲಸೆ ಕಾರ್ಮಿಕರನ್ನು ತೋಟದಿಂದ ಹೊರ ಹಾಕಿದ್ದಾರೆ ಎನ್ನಲಾದ ಘಟನೆ ಬುಧವಾರ ರಾತ್ರಿ ವರದಿಯಾಗಿದೆ.
ಸಕಲೇಶಪುರ ತಾಲೂಕಿನ ಕಡ್ಡಿಪುಡಿ ಎಸ್ಟೇಟ್‍ನಿಂದ ಹೊರ ಬಿದ್ದ ಕಾರ್ಮಿಕರು ವಾಹನವೊಂದರಲ್ಲಿ ಬಳ್ಳಾರಿಗೆ ಹೋಗುತ್ತಿದ್ದ ವೇಳೆ ಕಡೂರು ಸಮೀಪದ ಚೆಕ್‍ಪೋಸ್ಟ್ ನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆಂದು ತಿಳಿದುಬಂದಿದ್ದು, ಈ ಘಟನೆ ಸಂಬಂಧ ಪೊಲೀಸರು ಎಸ್ಟೇಟ್ ಮಾಲಕ ಸೇರಿದಂತೆ ವಾಹನ ಚಾಲಕ, ವಾಹನದ ಮಾಲಕ ಹಾಗೂ ಎಸ್ಟೇಟ್‍ನ ಮ್ಯಾನೇಜರ್ ನನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುಮಾರನಾಯ್ಕನ ತಂಡ್ಯದಿಂದ ಕೆಲ ತಿಂಗಳ ಹಿಂದೆ ಮಹಿಳೆಯರು, ಮಕ್ಕಳು ಸೇರಿದಂತೆ 33 ಮಂದಿ ಕಾರ್ಮಿಕರ ಕುಟುಂಬಗಳು ಕೂಲಿ ಕೆಲಸಕ್ಕೆಂದು ವಲಸೆ ಬಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಾಫಿ ತೋಟದಲ್ಲಿ ಕೆಲಕ್ಕೆ ಸೇರಿದ್ದರೆಂದು ತಿಳಿದುಬಂದಿದೆ. ಈ ಮಧ್ಯೆ ಲಾಕ್‍ಡೌನ್ ನಿರ್ಬಂಧ ಜಾರಿಯಾಗಿದ್ದರಿಂದ ಈ ಕಾರ್ಮಿಕರಿಗೆ ಸಾರಿಗೆ ಸೌಲಭ್ಯ ದೊರಯದ ಕಾರಣಕ್ಕೆ ಕಾರ್ಮಿಕರು ಎಸ್ಟೇಟ್‍ನಲ್ಲೇ ಉಳಿದುಕೊಂಡಿದ್ದರೆಂದು ತಿಳಿದುಬಂದಿದೆ.
ಆದರೆ ಎಸ್ಟೇಟ್ ಮಾಲಕ ಕಾರ್ಮಿಕರಿಗೆ ಕೆಲಸ, ಆಶ್ರಯ ನೀಡದೇ ಕಾರ್ಮಿಕರನ್ನು ಎಸ್ಟೇಟ್‍ನಿಂದ ಹೊರ ಹಾಕಿದ್ದನೆಂದು ಆರೋಪಿಸಲಾಗಿದ್ದು, ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲದ ಕಾರ್ಮಿಕರು ಪಿಕ್‍ಅಪ್ ವಾಹನದ ಮಾಲಕ, ಚಾಲಕರ ಬಳಿ ಬಾಡಿಗೆ ಮಾತನಾಡಿ ಸ್ವಗ್ರಾಮಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಅದರಂತೆ ಬುಧವಾರ ಮುಂಜಾನೆ ಸುಮಾರು 3.30ರ ಸಮಯದಲ್ಲಿ ಬೊಲೆರೋ ಪಿಕ್‍ಅಪ್ ವಾಹನದಲ್ಲಿ 33 ಕಾರ್ಮಿಕರನ್ನು ತುಂಬಿಕೊಂಡ ಚಾಲಕ ಸಕಲೇಶಪುರದಿಂದ ಕಡೂರು ಮಾರ್ಗವಾಗಿ ಬಳ್ಳಾರಿಯತ್ತ ಹೊರಟ್ಟಿದ್ದ ಎಂದು ತಿಳಿದುಬಂದಿದೆ.
33 ಜನರನ್ನು ವಶಕ್ಕೆ ಪಡೆದ ಪೊಲೀಸರು ಕಡೂರು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲರ ಆರೋಗ್ಯ ತಪಾಸಣೆ ಮಾಡಿಸಿ, ನಿರಾಶ್ರಿತರ ಕೇಂದ್ರವೊಂದರಲ್ಲಿ ಕ್ವಾರಂಟೈನ್‍ನಲ್ಲಿರಿಸಿದರೆಂದು ತಿಳಿದುಬಂದಿದೆ.
ಲಾಕ್‍ಡೌನ್ ನಿರ್ಬಂಧ ಉಲ್ಲಂಘಿಸಿ ಕಾರ್ಮಿಕರನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ವಾಹನದ ಮಾಲಕ ಮತ್ತು ಚಾಲಕನನ್ನು ಬಂಧಿಸಿದ್ದು, ಕಾರ್ಮಿಕರನ್ನು ಎಸ್ಟೇಟ್‍ನಿಂದ ಹೊರ ಹಾಕಿದ ಆರೋಪದಲ್ಲಿ ಎಸ್ಟೇಟ್ ಮಾಲಕ ಹಾಗೂ ಮ್ಯಾನೇಜರ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.







