ಸುರಕ್ಷಿತ ಅಂತರವನ್ನೇ ಮರೆತರೆ ಸಚಿವ ಹೆಬ್ಬಾರ್ ಹಾಗೂ ಶಾಸಕ ಸುನಿಲ್ ನಾಯ್ಕ ?

ಭಟ್ಕಳ : ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ ಎಂದು ಹೇಳುವ ಸರ್ಕಾರದ ಪ್ರತಿನಿಧಿಗಳೇ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳದೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಹೇಗೆ ಎನ್ನುವ ಮಾತುಗಳು ಕೇಳಿ ಬಂದಿದ್ದು ಗುರುವಾರ ಭಟ್ಕಳ ಪ್ರವಾಸಕೈಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಅವರ ಜತೆಯಲ್ಲಿ ಶಾಸಕ ಸುನಿಲ್ ನಾಯ್ಕ, ಅಧಿಕಾರಿಗಳು ಹಾಗೂ ಇತರ ಜನಪ್ರತಿನಿಧಿಗಳು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳದೆ ಮುಖಕ್ಕೆ ಮಾಸ್ಕನ್ನು ಧರಿಸಿದೆ ಕೇಂದ್ರ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನೂ ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಗುರುವಾರ ಭಟ್ಕಳಕ್ಕೆ ಬಂದ ಸಚಿವರ ಮೊದಲು ಪ್ರವಾಸಿ ಬಂಗ್ಲೆ ಕಾರ್ಯಕರ್ತರ ಸಭೆ ನಡೆಸಿ ನಂತರ ತಾಲೂಕು ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ಅವಧಿ ಪೂರ್ಣಗೊಳಿಸಿದ ಮೂವರು ಹೂಗುಚ್ಚ ನೀಡಿ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿದ್ದು ಅಲ್ಲಿ ಶಾಸಕ ಸುನಿಲ್ ನಾಯ್ಕರೊಂದಿಗೆ ಯಾವುದೇ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಪರಸ್ಪರ ದೇಹಕ್ಕೆ ತಾಗಿಕೊಂಡ ರೀತಿಯಲ್ಲಿ ನಿಂತುಕೊಂಡಿರುವುದು ಸಾರ್ವಜನಿಕರ ಚರ್ಚೆಗೆ ವಿಷಯವಾಗಿದೆ. ಅಲ್ಲದೆ ಕೆಲ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ಯಾವುದೇ ಸುರಕ್ಷಿತ ಅಂತರ ಕಾಯ್ದುಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದ್ದು ನಂತರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ಪೂರ್ವದಲ್ಲಿ ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಸಚಿವ ಶಾಸಕರನ್ನು ಭೇಟಿಯಾಗುವ ನೆಪದಲ್ಲಿ ಸುರಕ್ಷಿತ ಅಂತರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.







