ವಿಷಮ ಸ್ಥಿತಿಯಲ್ಲಿ ರಮಝಾನ್ ತಿಂಗಳ ಸದ್ಬಳಕೆ ಹೇಗೆ?

ಸಾಮಾನ್ಯವಾಗಿ ರಮಝಾನ್ ತಿಂಗಳೆಂದರೆ, ಧರ್ಮದ ಕುರಿತು ತಿಳುವಳಿಕೆ ಪಡೆಯುವ ಮತ್ತು ಮಾಹಿತಿ ಸಂಗ್ರಹಿಸುವ ತಿಂಗಳಾಗಿರುತ್ತದೆ. ವಿಶೇಷವಾಗಿ ‘ಕೋವಿಡ್ ರಮಝಾನ್’ನಲ್ಲಿ ಅದಕ್ಕೆ ಹೆಚ್ಚಿನ ಅವಕಾಶಗಳಿವೆ. ರಮಝಾನ್ ಅಂದರೆ ಕುರ್‌ಆನ್ ಅನಾವರಣಗೊಂಡ ತಿಂಗಳು. ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಬೇಕಾದ ತಿಂಗಳು. ಕುರ್‌ಆನ್‌ನ ಆಶಯ ಪ್ರಕಾರ ಬದುಕುತ್ತೇವೆ ಎಂದು ಪ್ರತಿಜ್ಞೆ ಮಾಡುವ ತಿಂಗಳು. ಈ ತಿಂಗಳಲ್ಲಿ ಕೇವಲ ಔಪಚಾರಿಕವಾಗಿ ಕುರ್‌ಆನ್ ಅನ್ನು ಪೂರ್ತಿ ಓದಿ ಮುಗಿಸಿ ಅಷ್ಟಕ್ಕೇ ತಾವು ಕರ್ತವ್ಯ ಮುಕ್ತರಾದೆವೆಂದು ತೃಪ್ತಿಪಡುವವರಿದ್ದಾರೆ. ಆದರೆ ಕುರ್‌ಆನ್‌ನ ಬಗ್ಗೆ ಪ್ರಾಮಾಣಿಕ ಒಲವು ಉಳ್ಳವರು ಈ ಬಾರಿ ಈ ತಿಂಗಳಲ್ಲಿ ದೊರೆಯುವ ಪುರುಸೊತ್ತನ್ನು ಕುರ್‌ಆನ್ ಕುರಿತಾದ ಗಂಭೀರ ಅಧ್ಯಯನಕ್ಕಾಗಿ ಮೀಸಲಿಡಬಹುದು.
ಜಗತ್ತಿನಲ್ಲಿಂದು ಮಾನವೀಯ ಸಂಬಂಧಗಳ ಸಹಿತ ಸಕಲವೂ ಕೊರೋನ ಬಾಧಿತವಾಗಿರುವ ಹಿನ್ನೆಲೆಯಲ್ಲಿ ಕೊರೋನದ ಕರಿನೆರಳಲ್ಲಿ ರಮಝಾನ್ ತಿಂಗಳನ್ನು ನಿಭಾಯಿಸುವುದು ಹೇಗೆ ? ಎಂದು ಹಲವರು ಚಿಂತೆಗೀಡಾಗಿದ್ದಾರೆ. ಕೊರೋನ ಪ್ರೇರಿತ ತುರ್ತು ಪರಿಸ್ಥಿತಿಯು ಖಂಡಿತವಾಗಿಯೂ ಪವಿತ್ರ ರಮಝಾನ್ ತಿಂಗಳನ್ನು ಆಚರಿಸುತ್ತಿರುವವರ ಮೇಲೆ ತನ್ನ ಕರಿ ನೆರಳನ್ನು ಆವರಿಸಲಿದೆ ಮತ್ತು ರಮಝಾನ್ ದಿನಚರಿಯ ಮೇಲೆ ಹಲವು ವಿಧದಲ್ಲಿ ಪ್ರಭಾವ ಬೀರಲಿದೆ ಎಂಬುದರಲ್ಲಂತೂ ಸಂದೇಹವಿಲ್ಲ. ಆದರೆ ಕೊರೋನ ಮೂಲಕ ರಮಝಾನ್ ತಿಂಗಳ ಮೇಲಾಗುವ ಎಲ್ಲ ಪರಿಣಾಮಗಳೂ ಪ್ರತಿಕೂಲವೆನ್ನುವಂತಿಲ್ಲ. ಹಲವಾರು ಅನುಕೂಲಕರ ಪರಿಣಾಮಗಳಾಗುವ ಸಾಧ್ಯತೆಯೂ ಇದೆ. ವಿಶೇಷವಾಗಿ ಕೊರೋನ ಋತು ಜಗತ್ತಿನ ಕೋಟ್ಯಂತರ ಮಂದಿಯ ಮೇಲೆ ಉಪವಾಸವನ್ನು ಹೇರಲಿಕ್ಕಾಗಿಯೇ ಬಂದಿರುವ ಋತುವಾದ್ದರಿಂದ ಕೊರೋನ ಜನಿತ ವಾತಾವರಣವು, ಸ್ವಯಂ ಪ್ರೇರಿತರಾಗಿ ರಮಝಾನ್ ಉಪವಾಸ ಆಚರಿಸುವವರ ಪಾಲಿಗೆ ಪೂರಕವೇ ಹೊರತು ಪ್ರತಿಕೂಲವಲ್ಲ. ಹಲವು ಖಾಸಗಿ ಸತ್ಕಾರ್ಯಗಳ ಋತು ಇದಕ್ಕೆ ಕಾರಣಗಳಿವೆ. ಧರ್ಮದ ಕಡೆಯಿಂದ, ರಮಝಾನ್ ತಿಂಗಳಲ್ಲಿ ಪಾಲಿಸಲಿಕ್ಕೆಂದು ಮುಸ್ಲಿಮರಿಗೆ ವಿಧಿಸಲಾಗಿರುವ ಅನೇಕ ಚಟುವಟಿಕೆಗಳ ಪೈಕಿ ಕೆಲವು ಸಮೂಹ ಚಟುವಟಿಕೆಗಳು ಮತ್ತು ಕೆಲವು ಖಾಸಗಿ ಚಟುವಟಿಕೆಗಳು.
ನಿಜವಾಗಿ ಈ ತಿಂಗಳಲ್ಲಿ ವಿಧಿಸಲಾಗಿರುವ ಸಮೂಹ ಚಟುವಟಿಕೆಗಳಿಗೆ ಹೋಲಿಸಿದರೆ ಖಾಸಗಿ ಚಟುವಟಿಕೆಗಳೇ ತುಂಬಾ ಹೆಚ್ಚು. ಆದರೆ ಧರ್ಮದ ತಿರುಳಿನ ಬದಲಿಗೆ ಅದರ ಚಿಪ್ಪನ್ನು ಮಾತ್ರ ನೆಚ್ಚಿಕೊಂಡವರ ಗಮನವೆಲ್ಲಾ ರಮಝಾನ್ ತಿಂಗಳಲ್ಲಿ ನಡೆಯುವ ಸಮೂಹ ಚಟುವಟಿಕೆಗಳಲ್ಲಿ ಕೇಂದ್ರಿತವಾಗಿರುತ್ತದೆ. ಉದಾ: ಐದು ಹೊತ್ತಿನ ಕಡ್ಡಾಯ ಸಾಮೂಹಿಕ ನಮಾಝ್ (ಇದು ವರ್ಷವಿಡೀ ಕಡ್ಡಾಯ. ಆದರೆ ಅನೇಕರು ರಮಝಾನ್ ತಿಂಗಳಲ್ಲಿ ಮಾತ್ರ ಪಾಲಿಸುತ್ತಾರೆ), ಸಾಮೂಹಿಕ ಇಫ್ತಾರ್, ಸಾಮೂಹಿಕ ತರಾವೀಹ್ ನಮಾಝ್ ಇತ್ಯಾದಿ. ಮಸೀದಿಗಳಲ್ಲಿ ಆಚರಿಸಲಾಗುವ ಈ ಎಲ್ಲ ಸಮೂಹ ಚಟುವಟಿಕೆಗಳು ಕೊರೋನದಿಂದಾಗಿ ಬಾಧಿತವಾಗಬಹುದು ಎಂಬುದು ನಿಜ. ಸಾಮೂಹಿಕ ಹಿತದೃಷ್ಟಿಯಿಂದ ‘ಕೊರೋನ ಸಂಬಂಧಿ ಲಾಕ್‌ಡೌನ್’ ಅವಧಿಯಲ್ಲಿ ಈ ಎಲ್ಲ ಸಾಮೂಹಿಕ ಚಟುವಟಿಕೆಗಳನ್ನು ಮಸೀದಿಯ ಬದಲು, ಖಾಸಗಿಯಾಗಿ ಮನೆಯೊಳಗೇ ಸಲ್ಲಿಸಬೇಕಾದುದು ತಮ್ಮ ಧಾರ್ಮಿಕ, ಸಾಮಾಜಿಕ ಹಾಗೂ ನೈತಿಕ ಕರ್ತವ್ಯ ಎಂಬುದನ್ನು ಜಗತ್ತಿನೆಲ್ಲೆಡೆಯ ಮುಸ್ಲಿಮರು ಅಂಗೀಕರಿಸಿದ್ದಾರೆ. ಆದರೆ ರಮಝಾನ್ ತಿಂಗಳಲ್ಲಿ ಮಾಡಬೇಕೆಂದು ಆದೇಶಿಸಲಾಗಿರುವ ಖಾಸಗಿ ಚಟುವಟಿಕೆಗಳ ಒಂದು ದೊಡ್ಡ ಪ್ರಪಂಚವೇ ಇದೆಯಲ್ಲ? ಕೊರೋನದಿಂದಾಗಿ ಆ ಪೈಕಿ ಯಾವ ಚಟುವಟಿಕೆಯೂ ಬಾಧಿತವಾಗುವುದಿಲ್ಲ ಮಾತ್ರವಲ್ಲ, ಲಾಕ್‌ಡೌನ್ ವಾತಾವರಣವು ಆ ಚಟುವಟಿಕೆಗಳಿಗೆ ಪೂರಕವೇ ಆಗಿದೆ. ಮಹಿಳೆಯರ ದೃಷ್ಟಿಕೋನದಿಂದ ನೋಡುವುದಾದರೆ ಹೆಚ್ಚಿನ ಮಹಿಳೆಯರು ಹಿಂದಿನಿಂದಲೂ ರಮಝಾನ್‌ಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನೂ ಮನೆಯಲ್ಲೇ ನಿರ್ವಹಿಸುತ್ತಾ ಬಂದಿದ್ದಾರೆ. ಆದ್ದರಿಂದ ಲಾಕ್‌ಡೌನ್ ಅವಧಿಯಲ್ಲಿ ಅವರ ದಿನಚರಿಯಲ್ಲಿ ದೊಡ್ಡ ಬದಲಾವಣೆಯೇನೂ ಆಗುವುದಿಲ್ಲ. ಹೆಚ್ಚೆಂದರೆ ನಗರ ಪ್ರದೇಶಗಳಲ್ಲಿ ಐದಾರು ಪರಿಚಯಸ್ಥ ಕುಟುಂಬಗಳು ಅಥವಾ ಐದಾರು ಬಂಧುಗಳ ಪರಿವಾರದವರು ಯಾವುದಾದರೂ ಒಂದು ಮನೆಯಲ್ಲಿ ಸೇರಿ ಜೊತೆಯಾಗಿ ನಡೆಸುವ ‘ಫ್ಯಾಮಿಲಿ ಇಫ್ತಾರ್ ಕೂಟ’ ಗಳಿಗೆ ಕತ್ತರಿ ಬೀಳಲಿದೆ, ಅಷ್ಟೇ. ಅದು ತುಂಬಲಾಗದ ನಷ್ಟವೇನೂ ಅಲ್ಲ.
ಹದಿನಾಲ್ಕು ಆಧ್ಯಾತ್ಮಿಕ ಚಟುವಟಿಕೆಗಳು ಈ ಬಾರಿ ಮನೆಗಳಲ್ಲಿ ರಮಝಾನ್ ತಿಂಗಳನ್ನು ಕಳೆಯಲು ನಿರ್ಬಂಧಿತರಾಗಿರುವ ಯಾರೂ ಅದನ್ನೊಂದು ಅನಿವಾರ್ಯ ಬಂಧನವೆಂದು ಪರಿಗಣಿಸಬೇಕಾಗಿಲ್ಲ. ಸರಿಯಾಗಿ ಮಾನಸಿಕ ಸಿದ್ಧತೆಯೊಂದಿಗೆ ‘ಕೋವಿಡ್ ರಮಝಾನ್’ ಅನ್ನು ಸ್ವಾಗತಿಸಲು ಹೊರಟವರ ಪಾಲಿಗೆ ಇದು ಒಂದು ಅಪೂರ್ವ, ದೇವದತ್ತ ಅವಕಾಶವಾಗಿ ಪರಿಣಮಿಸುವ ಸಾಧ್ಯತೆ ಇದೆ. ರಮಝಾನ್ ನಲ್ಲಿ ಮಾಡಲಾಗುವ ಹಲವು ಚಟುವಟಿಕೆ ಗಳ ಪೈಕಿ ಉದಾಹರಣೆಯಾಗಿ ಈ ಕೆಳಗಿನ ಹದಿನಾಲ್ಕು ಚಟುವಟಿಕೆಗಳನ್ನು ಗಮನಿಸಿ: ತಿಲಾವತ್ (ಕುರ್‌ಆನ್ ಪಠಣ), ನಫಿಲ್ (ಐಚ್ಛಿಕ ನಮಾಝ್), ದಿಕ್ರ್ (ದೇವರ ಸ್ಮರಣೆ ಮತ್ತು ದೇವನಾಮಗಳ ಪ್ರಸ್ತಾಪ), ತಸ್ಬೀಹ್ (ಅಲ್ಲಾಹನ ಪಾವಿತ್ರ್ಯ ಮತ್ತು ಅಮಿತ ಸ್ವರೂಪದ ಪ್ರಸ್ತಾಪ), ತಕ್ಬೀರ್ (ಅಲ್ಲಾಹನ ಮಹಿಮೆಯ ವರ್ಣನೆ), ತಹ್ಮೀದ್ (ಅಲ್ಲಾಹನ ಪ್ರಶಂಸೆ ಮತ್ತು ಅವನಿಗೆ ಕೃತಜ್ಞತೆ ಸಲ್ಲಿಕೆ), ತಹಲೀಲ್ (ಅಲ್ಲಾಹನೊಬ್ಬನೇ ಅನನ್ಯ ಆರಾಧ್ಯನೆಂಬ ಮೂಲ ವಚನದ ಪುನರಾವರ್ತನೆ), ತಝ್ಕಿಯ (ಸಂಸ್ಕರಣೆ), ತಝ್ಕಿರ್ (ದೇವಾನುಗ್ರಹಗಳ ಮತ್ತು ದೇವದತ್ತ ಕರ್ತವ್ಯಗಳ ಪ್ರಸ್ತಾಪ ಹಾಗೂ ಚಿತ್ತದ ಕುರಿತು ಜಾಗೃತಿಬೆಳೆಸುವ ಉಪದೇಶ), ತೌಬಾ (ಪಶ್ಚಾತ್ತಾಪ), ಇಸ್ತಿಗ್ಫಾರ್ (ಕ್ಷಮಾಯಾಚನೆ), ತಹಜ್ಜುದ್ (ತಡರಾತ್ರಿಯ ಏಕಾಂತದ ನಮಾಝ್), ತಅಲೀಮ್ (ಕಲಿಕೆ ಮತ್ತು ಕಲಿಸುವಿಕೆ), ದುಆ (ಪ್ರಾರ್ಥನೆ).
ಈ ಪೈಕಿ ಪ್ರತಿಯೊಂದು ಚಟುವಟಿಕೆಯ ವಿಶೇಷತೆ ಏನೆಂದರೆ ಅದನ್ನು ಸಾರ್ವಜನಿಕ ಸ್ಥಳದಲ್ಲಿ ಮಾಡುವುದಕ್ಕಿಂತ ಅಥವಾ ಮಸೀದಿಯಲ್ಲಿ ಹಲವು ಜನರ ಮಧ್ಯೆ ಕುಳಿತು ಮಾಡುವುದಕ್ಕಿಂತ ಎಷ್ಟೋ ಹೆಚ್ಚು ಪರಿಣಾಮಕಾರಿಯಾಗಿ ಮನೆಯೊಳಗೇ, ಕೋಣೆ ಯೊಳಗೆ ಮತ್ತು ಏಕಾಂತದಲ್ಲಿ ಮಾಡಬಹುದು. ಈಬಾರಿಯ ರಮಝಾನ್ ಆ ದೃಷ್ಟಿಯಿಂದ ಹೆಚ್ಚು ಸಹಾಯಕವಾಗಿದೆ. ಅದು ಸಾಮಾನ್ಯವಾಗಿ ರಾತ್ರಿ ತಡವಾಗಿ ಮಾತ್ರ ಮನೆಗೆ ಬರುವವರನ್ನು ದಿನವಿಡೀ ಮನೆಯಲ್ಲಿ ಕೂರಿಸಲಿದೆ. ಆ ಮೂಲಕ ಈ ಮೇಲಿನ ಎಲ್ಲ ಪ್ರಾಮುಖ್ಯ, ಪುಣ್ಯದಾಯಕ ಚಟುವಟಿಕೆಗಳಲ್ಲಿ ತಲ್ಲೀನರಾಗಲು ಅವರಿಗೆಲ್ಲಾ ಅವಕಾಶ ಕಲ್ಪಿಸಿಕೊಡಲಿದೆ. ಮನೆಯನ್ನೇ ಮಸೀದಿಯಾಗಿಸಲು ಪ್ರೇರಣೆ ಕೊಡಲಿದೆ. ‘ಇಹ್ತಿಸಾಬ್’ ಅಥವಾ ಆತ್ಮಾವಲೋಕನ ರಮಝಾನ್ ನ ಇನ್ನೊಂದು ಪ್ರಧಾನ ಚಟುವಟಿಕೆ ‘ಇಹ್ತಿಸಾಬ್’. ಹಾಗೆಂದರೆ ಆತ್ಮಾವಲೋಕನ ಎಂದರ್ಥ. ಅದು ಚಿತ್ತ ಶುದ್ಧಿ ಅಥವಾ ಅಂತರಂಗ ಶುದ್ಧಿಯ ನಿಟ್ಟಿನಲ್ಲಿ ಪ್ರಥಮ ನಿರ್ಣಾಯಕ ಹೆಜ್ಜೆಯಾಗಿದೆ. ಪ್ರವಾದಿ ಮುಹಮ್ಮದ್ (ಸ) ಹೇಳಿರುವ ಪ್ರಕಾರ ‘ಇಹ್ತಿಸಾಬ್’ ಅಥವಾ ಆತ್ಮಾವಲೋಕನವು ಉಪವಾಸದ ಅವಿಭಾಜ್ಯ ಭಾಗವಾಗಿದೆ.
ಪ್ರವಾದಿವರ್ಯರು ತಿಳಿಸಿರುವಂತೆ ಅಲ್ಲಾಹನ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿಯ ಉಪವಾಸವು ಸ್ವೀಕೃತವಾಗಬೇಕಿದ್ದರೆ ಎರಡು ಶರತ್ತುಗಳಿವೆ: 1. ಉಪವಾಸಿಗನ ಈಮಾನ್ ಅಥವಾ ವಿಶ್ವಾಸ ಮತ್ತು ನಂಬಿಕೆಯು ಸ್ವಸ್ಥವಾಗಿರಬೇಕು 2. ಉಪವಾಸಿಗನು ಪದೇ ಪದೇ ಆತ್ಮಾವಲೋಕನ ನಡೆಸುತ್ತಿರಬೇಕು. ಈ ಆತ್ಮಾವಲೋಕನವನ್ನು ಯಾರೂ ಇನ್ನೊಬ್ಬರ ಪರವಾಗಿ ನಡೆಸುವ ಹಾಗಿಲ್ಲ. ಪ್ರತಿಯೊಬ್ಬನೂ ಸ್ವತಃ ಮಾಡಬೇಕಾದ ಕೆಲಸ ಇದು. ಸಾರ್ವಜನಿಕ ಸ್ಥಳಗಳು ಆತ್ಮಾವಲೋಕನಕ್ಕೆ ಪೂರಕವಾಗಿರುವುದಿಲ್ಲ. ಅನ್ಯರು ತನ್ನನ್ನು ಯಾವ ದೃಷ್ಟಿಯಿಂದ ಕಾಣುತ್ತಾರೆ ಎಂಬ ಚಿಂತೆಯಿಂದ ಮುಕ್ತನಾಗಿ, ಎಲ್ಲರಿಂದ ದೂರ ಕುಳಿತು, ಎಲ್ಲ ಚಿಂತೆಗಳನ್ನು ದೂರವಿಟ್ಟು, ಅಂತರ್ಮುಖಿಯಾಗಿ, ಬಹಳ ವಿಮರ್ಶಾತ್ಮಕವಾಗಿ ನಡೆಸಬೇಕಾದ ಚಟುವಟಿಕೆ ಇದು. ಸಾಮಾನ್ಯವಾಗಿ ಇತರರ ಕರ್ಮಗಳನ್ನು ಮಾತ್ರ ವಿಮರ್ಶಾತ್ಮಕವಾಗಿ ಕಂಡು ಇತರರನ್ನು ಮಾತ್ರ ಅಳೆದು, ತೂಗಿ ಅಭ್ಯಾಸ ಉಳ್ಳವರು ಈ ರೀತಿ ತುಸು ಹೊತ್ತು ಸ್ವತಃ ತಮ್ಮ ವಿಮರ್ಶೆಗೆ ಕುಳಿತಾಗ, ತಮ್ಮ ಅಂತರಂಗದೊಳಗೆ ಇಣುಕಿ ನೋಡಿದಾಗ ಬೆಚ್ಚಿ ಬೀಳುವುದುಂಟು. ತಮ್ಮ ಆಚಾರ ಮತ್ತು ವಿಚಾರಗಳು ಎಷ್ಟೊಂದು ಮಲಿನವಾಗಿವೆ ಎಂದು ಅರಿತು ಆಘಾತಗೊಳ್ಳುವುದುಂಟು. ಈ ರೀತಿ ಮನುಷ್ಯನನ್ನು ಅವನು ಇಷ್ಟಪಡದ ಒಂದು ಚಟುವಟಿಕೆಯಲ್ಲಿ ತೊಡಗಿಸಿ, ಸಾಮಾನ್ಯ ದಿನಗಳಲ್ಲಿ ಅವನಿಗೆಂದೂ ಕಾಣದ ಅವನ ಅಂತರಂಗದ ಒಳಸ್ಥಿತಿಯನ್ನು ಅವನಿಗೆ ಪರಿಚಯಿಸಿ ಅಂತರಂಗಶುದ್ಧಿಯ ಮಹತ್ವವನ್ನು ಅವನಿಗೆ ಮನವರಿಕೆ ಮಾಡಿಸಿ ಬಿಡುತ್ತದೆ.
ಆತ್ಮಾವಲೋಕನವನ್ನು ಸರಿಯಾದ ರೀತಿಯಲ್ಲಿ ನಡೆಸಿದವನು ಸ್ವಸಂಸ್ಕರಣೆಯ ಕಾಯಕದಲ್ಲಿ ತೊಡಗುತ್ತಾನೆ. ತನ್ನ ಮಾತು ಅಥವಾ ಕೃತಿಗಳಿಂದ ನಡೆದಿರಬಹುದಾದ ಅನ್ಯಾಯಗಳ ಬಗ್ಗೆ ಪಶ್ಚಾತ್ತಾಪ ಪಟ್ಟು ಯಾರಿಗೆ ಅನ್ಯಾಯವಾಗಿದೆಯೋ ಅವರ ಬಳಿ ಕ್ಷಮೆಯಾಚಿಸಿ, ಅವರಿಗೆ ಸಲ್ಲಬೇಕಾದುದನ್ನು ಸಲ್ಲಿಸಿ, ಒಂದಷ್ಟು ಪರಿಹಾರವನ್ನೂ ಕೊಟ್ಟು ಅವರನ್ನು ಮೆಚ್ಚಿಸಿ ಪಾಪ ಮುಕ್ತನಾಗಲು ಶ್ರಮಿಸುತ್ತಾನೆ. ಮುಂದೆ ತನ್ನಿಂದ ಅಂತಹ ಪಾಪ ಸಂಭವಿಸದಂತೆ ಎಚ್ಚರ ವಹಿಸುತ್ತಾನೆ. ಆತ್ಮಾವಲೋಕನವು ಮುರಿದು ಬಿದ್ದ ಎಷ್ಟೋ ಸಂಬಂಧಗಳ ಪುನಃಸ್ಥಾಪನೆಗೆ ಕಾರಣವಾಗುತ್ತದೆ. ಹಾಗೆಯೇ ಅದು ಎಷ್ಟೋ ದುರಭ್ಯಾಸಗಳಿಂದ ಮುಕ್ತರಾಗಿ ಹೊಸ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಹೊಸ ಬದುಕಿಗೆ ನಾಂದಿ ರಮಝಾನ್ ತಿಂಗಳು ತೀರಾ ಹೊಸಬಗೆಯ ದಿನಚರಿ ಮತ್ತು ವೇಳಾಪಟ್ಟಿಯೊಂದಿಗೆ ಬರುತ್ತದೆ. ಅದನ್ನು ಪಾಲಿಸುವುದಕ್ಕೆ ಸಮಯಪಾಲನೆ ಮತ್ತು ಶಿಸ್ತು ತುಂಬಾ ಅಗತ್ಯ. ಬದುಕಿನಲ್ಲಿ ಬದಲಾವಣೆ ಬಯಸುವವರು ಈ ತಿಂಗಳನ್ನು ತಮ್ಮ ತರಬೇತಿಯ ತಿಂಗಳೆಂದು ಪರಿಗಣಿಸಿದರೆ ಈ ತಿಂಗಳು ಹೊಸ ಶಿಸ್ತುಬದ್ಧ ಬದುಕೊಂದರ ನಿರ್ಮಾಣಕ್ಕೆ ಹೇತುವಾಗಬಹುದು. ಸಾಮಾನ್ಯವಾಗಿ ರಮಝಾನ್ ತಿಂಗಳೆಂದರೆ, ಧರ್ಮದ ಕುರಿತು ತಿಳುವಳಿಕೆ ಪಡೆಯುವ ಮತ್ತು ಮಾಹಿತಿ ಸಂಗ್ರಹಿಸುವ ತಿಂಗಳಾಗಿರುತ್ತದೆ. ವಿಶೇಷವಾಗಿ ‘ಕೋವಿಡ್ ರಮಝಾನ್’ ನಲ್ಲಿ ಅದಕ್ಕೆ ಹೆಚ್ಚಿನ ಅವಕಾಶಗಳಿವೆ.
ರಮಝಾನ್ ಅಂದರೆ ಕುರ್‌ಆನ್ ಅನಾವರಣಗೊಂಡ ತಿಂಗಳು. ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಬೇಕಾದ ತಿಂಗಳು. ಕುರ್‌ಆನ್ ನ ಆಶಯ ಪ್ರಕಾರ ಬದುಕುತ್ತೇವೆ ಎಂದು ಪ್ರತಿಜ್ಞೆ ಮಾಡುವ ತಿಂಗಳು. ಈ ತಿಂಗಳಲ್ಲಿ ಕೇವಲ ಔಪಚಾರಿಕವಾಗಿ ಕುರ್‌ಆನ್ ಅನ್ನು ಪೂರ್ತಿ ಓದಿ ಮುಗಿಸಿ ಅಷ್ಟಕ್ಕೇ ತಾವು ಕರ್ತವ್ಯ ಮುಕ್ತರಾದೆವೆಂದು ತೃಪ್ತಿಪಡುವವರಿದ್ದಾರೆ. ಆದರೆ ಕುರ್‌ಆನ್‌ನ ಬಗ್ಗೆ ಪ್ರಾಮಾಣಿಕ ಒಲವು ಉಳ್ಳವರು ಈ ಬಾರಿ ಈ ತಿಂಗಳಲ್ಲಿ ದೊರೆಯುವ ಪುರುಸೊತ್ತನ್ನು ಕುರ್‌ಆನ್ ಕುರಿತಾದ ಗಂಭೀರ ಅಧ್ಯಯನಕ್ಕಾಗಿ ಮೀಸಲಿಡಬಹುದು. ಆಧುನಿಕ ತಂತ್ರಜ್ಞಾನರಂಗವು ಕುರ್‌ಆನ್ ಕುರಿತು ಅರಿಯಲು ಮತ್ತು ಕಲಿಯಲು ನೂರಾರು ಸವಲತ್ತು, ಸಲಕರಣೆಗಳನ್ನು ಒದಗಿಸಿದೆ. ಅವುಗಳನ್ನು ಬಳಸಿ ಈ ತಿಂಗಳನ್ನು ಕುರ್‌ಆನ್‌ನ ಅಧ್ಯಯನಕ್ಕೆ ಮೀಸಲಿಡಬಹುದು. ನಿತ್ಯ ಕುರ್‌ಆನ್ ಕುರಿತು ಅಧ್ಯಯನಕ್ಕೆಂದೇ ಇಂತಿಷ್ಟು ಸಮಯ ನಿಗದಿಪಡಿಸಿ ಕುಟುಂಬ ಸಮೇತ ಕುರ್‌ಆನ್ ಕಲಿಯಬಹುದು.
ಕುರ್‌ಆನ್ ಕುರಿತು ಟಿಪ್ಪಣಿಗಳನ್ನು ಮಾಡಿಕೊಳ್ಳಬಹುದು. ನೈಜ ಸವಾಲು ಸಾಮಾನ್ಯವಾಗಿ ರಮಝಾನ್ ತಿಂಗಳು ಆಧ್ಯಾತ್ಮಿಕ ಚಟುವಟಿಕೆಗಳಿಂದ ತುಂಬಿರುವ ತಿಂಗಳು. ಆದರೆ ಈ ಬಾರಿ ಕೋವಿಡ್ ಪೀಡಿತ ರಮಝಾನ್ ತಿಂಗಳಿಗೆ ಬೇರೊಂದು ಆಯಾಮವಿದೆ. ಅದು ಬಹಳ ಮಹತ್ವದ ಆಯಾಮ. ಶ್ರೀಮಂತರು ಮತ್ತು ಮೇಲ್ಮಧ್ಯಮವರ್ಗದವರು ವಿಶೇಷ ಗಮನ ಹರಿಸಬೇಕಾದ ಆಯಾಮ. ಈಬಾರಿ ಪ್ರತಿಯೊಂದು ನಗರ, ಉಪನಗರ ಮತ್ತು ಗ್ರಾಮಗಳಲ್ಲಿ ಲಕ್ಷಾಂತರ ಮಂದಿ ತಮ್ಮ ನಿತ್ಯದ ದುಡಿಮೆಯ ಬಾಗಿಲುಗಳು ಮುಚ್ಚಿದ್ದರಿಂದ ಹೊಟ್ಟೆಗೆ ಅನ್ನವಿಲ್ಲದೆ ಉಪವಾಸವಿರುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಈ ರೀತಿ ಯಾರೂ, ಯಾರ ಮಡದಿ ಮಕ್ಕಳೂ ಸನ್ನಿವೇಶದ ಒತ್ತಡದಿಂದ ಉಪವಾಸವಿರದಂತೆ ನೋಡಿಕೊಳ್ಳಬೇಕಾದ ದೊಡ್ಡ ಹೊಣೆಗಾರಿಕೆ ಎಲ್ಲ ಅನುಕೂಲಸ್ಥ ಉಪವಾಸಿಗರ ಮೇಲಿದೆ. ಬೇರೆಲ್ಲ ರಮಝಾನ್ ತಿಂಗಳಲ್ಲಿ ದಾನ ಧರ್ಮ ಮಾಡುತ್ತಿದ್ದವರು ಈ ಬಾರಿ ಕೇವಲ ದಾನ ಧರ್ಮ ಮಾಡಿದರೆ ಸಾಲದು. ತ್ಯಾಗ ಮಾಡಬೇಕಾಗುತ್ತದೆ. ಹೊಸ ಆದಾಯವಿಲ್ಲದೆ ಹಿಂದೆ ಕೂಡಿಟ್ಟ ಹಣದಲ್ಲಿ ಒಂದು ವಾರ ಬದುಕಲಿಕ್ಕೂ ಬಡ, ಕಾರ್ಮಿಕ, ಕೃಷಿಕ ವರ್ಗಗಳಿಗೆ ಸಾಧ್ಯವಿಲ್ಲ. ಈ ಬಾರಿಯಂತೂ ಅವರ ಪಾಲಿಗೆ ಆದಾಯದ ಬಾಗಿಲುಗಳು ಮುಚ್ಚಿ ಒಂದು ತಿಂಗಳು ಕಳೆದಿದೆ. ಅಂಥವರನ್ನು ಹುಡುಕಿಹೋಗಿ, ಅವರ ಸ್ವಾಭಿಮಾನವನ್ನು ಸಂಪೂರ್ಣ ಗೌರವಿಸುತ್ತಾ ಅವರಿಗೆ ಜೀವನಾವಶ್ಯಕ ವಸ್ತುಗಳನ್ನು ತಲುಪಿಸಬೇಕಾದುದು ಸಾಮಾನ್ಯ ಸುಸ್ಥಿತಿಯಲ್ಲಿರುವ ಉಪವಾಸಿಗರ ಕರ್ತವ್ಯವಾಗಿದೆ. ಇದು, ಉಳಿದದ್ದನ್ನು ಹಂಚುವ ಸಮಯ ಅಲ್ಲ. ಇದ್ದುದನ್ನೇ ಹಂಚಿ ತಿನ್ನಬೇಕಾದ ಸಮಯ. ಹೊಸ ರಮಝಾನ್ ನಮ್ಮ ಮುಂದೆ ತಂದಿಟ್ಟಿರುವ ಈ ಹೊಸ ಸವಾಲನ್ನು ನಾವು ಹೇಗೆ ನಿಭಾಯಿಸುತ್ತೇವೆಂಬುದೇ ಈ ಬಾರಿಯ ರಮಝಾನ್ ತಿಂಗಳಲ್ಲಿ ನಮ್ಮ ಪರೀಕ್ಷೆಯಾಗಿದೆ.







