ಅರ್ನಬ್ ಗೋಸ್ವಾಮಿ ಮೇಲೆ ಹಲ್ಲೆ ಆರೋಪ: ಇಬ್ಬರ ಬಂಧನ

ಮುಂಬೈ, ಎ.23: ತನ್ನ ಹಾಗೂ ಪತ್ನಿಯ ಮೇಲೆ ಗುರುವಾರ ಬೆಳಿಗ್ಗೆ ಹಲ್ಲೆ ನಡೆಸಲಾಗಿದೆ ಎಂದು ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಆರೋಪಿಸಿದ್ದು , ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ ರಾತ್ರಿ ತಮ್ಮ ಸ್ಟುಡಿಯೋದಿಂದ ಪತ್ನಿಯ ಜತೆ ಮನೆಗೆ ತೆರಳುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ತಮ್ಮ ಕಾರನ್ನು ಅಡ್ಡಗಟ್ಟಿ ಹಲ್ಲೆಗೆ ಪ್ರಯತ್ನಿಸಿದ್ದಾರೆ. ಅವರಲ್ಲಿ ಒಬ್ಬ ಕಾರಿನ ಮೇಲೆ ಕೈಯಲ್ಲಿದ್ದ ದ್ರಾವಣವನ್ನು ಎರಚಿದ್ದಾನೆ ಎಂದು ಗೋಸ್ವಾಮಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 341 ಮತ್ತು 504ರಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಲ್ಲೆಗೆ ಯತ್ನಿಸಿದವರು ಯುವ ಕಾಂಗ್ರೆಸ್ ಕಾರ್ಯಕರ್ತರು ಎಂದು ತನ್ನ ಭದ್ರತಾ ಸಿಬ್ಬಂದಿಯಿಂದ ತಿಳಿದು ಬಂದಿದೆ ಎಂದು ಅರ್ನಬ್ ಗೋಸ್ವಾಮಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅರ್ನಬ್ ಗೋಸ್ವಾಮಿ ನೆಹರೂ-ಗಾಂಧಿ ಕುಟುಂಬ ಹಾಗೂ ವಾದ್ರಾ ಕುಟುಂಬದವರನ್ನು ಉದ್ದೇಶಿಸಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ದೇಶದ ವಿವಿಧೆಡೆ ದೂರು ದಾಖಲಿಸಿದ ಬೆನ್ನಲ್ಲೇ ಗೋಸ್ವಾಮಿ ತನ್ನ ಮೇಲೆ ಯುವಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ ಎಂದು ದೂರು ನೀಡಿದ್ದಾರೆ.