ಸಂಕಷ್ಟದಲ್ಲಿರುವ ಕೂಲಿಕಾರ್ಮಿಕರು, ಬಡವರಿಗೆ ಬಿಎಸ್ಪಿ ನೆರವು

ಬೆಂಗಳೂರು, ಎ. 23: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೂಲಿಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಬಹುಜನ ಸಮಾಜ ಪಕ್ಷದಿಂದ 800 ದಿನಸಿ ಆಹಾರ ಪದಾರ್ಥಗಳ ಕಿಟ್ ಹಾಗೂ ಪ್ರತಿನಿತ್ಯ ಆರು ನೂರು ಜನರಿಗೆ ಉಪಾಹಾರ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಜಿಲ್ಲಾಧ್ಯಕ್ಷ ಶ್ರೀನಿವಾಸ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸೇರಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ, ಕಸ್ತೂರಿನಗರ ಸೇರಿದಂತೆ ವಿವಿಧೆಡೆಗಳಲ್ಲಿ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್ ಮತ್ತು ಉಪಾಹಾರ ವ್ಯವಸ್ಥೆ ಮಾಡಲಾಗಿದೆ.
ರಾಜ್ಯ ಸರಕಾರ ಕಾರ್ಮಿಕರ ಕಲ್ಯಾಣ ನಿಧಿಯ 8 ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ಬಳಸಿ ವಲಸೆ ಕಾರ್ಮಿಕರು ಹಾಗೂ ಬಡ ಕೂಲಿ ಕಾರ್ಮಿಕರಿಗೆ ದಿನಸಿ ಮತ್ತು ಆಹಾರದ ಕಿಟ್ ನೀಡುತ್ತಿದೆ. ಆದರೆ, ಅವುಗಳು ಕಾರ್ಮಿಕರ ಬದಲಿಗೆ ಆಡಳಿತಾರೂಢ ಬಿಜೆಪಿಯ ಕಾರ್ಪೋರೇಟರ್‍ಗಳು, ಶಾಸಕರು ಹಾಗೂ ಮುಖಂಡರ ಮನೆ ಸೇರುತ್ತಿದ್ದು, ತಮ್ಮ ಪಕ್ಷದ ಮತದಾರರಿಗೆ ಹಾಗೂ ಬೆಂಬಲಿಗರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಶ್ರೀನಿವಾಸ್ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯ ಸರಕಾರಕ್ಕೆ ಬಡ ಕೂಲಿ ಕಾರ್ಮಿಕರ ಬಗ್ಗೆ ಕನಿಷ್ಟ ಕಳಕಳಿ ಇದ್ದರೆ ಕೂಡಲೇ ಕಾರ್ಮಿಕರ ಹಣದಲ್ಲಿ ತಮ್ಮ ವೈಯಕ್ತಿಕ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಎಲ್ಲ ಕಾರ್ಮಿಕರಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿ, ಬಡವರಿಗೆ ಅನುಕೂಲ ಕಲ್ಪಿಸಬೇಕು. ಅಲ್ಲದೆ, ಕೊರೋನ ವೈರಸ್ ಸೋಂಕು ತಡೆಗಟ್ಟಲು ಸೂಕ್ತ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬೆಂಗಳೂರು ಬಿಎಸ್ಪಿ ವಿಭಾಗೀಯ ಉಸ್ತುವಾರಿ ಎಂ.ಗುರುಮೂರ್ತಿ, ಮುಖಂಡರಾದ ಶಶಿಕಾಂತ್, ಮುನಿರಾಜು, ಮುಜಾಹಿದ್ ಸೇರಿದಂತೆ ಸ್ಥಳೀಯ ಪದಾಧಿಕಾರಿಗಳು ಹಾಜರಿದ್ದರು.







