ಸಮಾಧಾನ್ ಯೋಜನೆಗಾಗಿ ಸಲ್ಲಿಸಿದ ಆವಿಷ್ಕಾರಗಳ ಆಯ್ಕೆ
ಕಲಬುರಗಿ, ಎ.23: ಕೋವಿಡ್ 19 ವಿರುದ್ಧ ರಾಷ್ಟ್ರದ ಹೋರಾಟ ಬಲಪಡಿಸುವ ‘ಸಮಾಧಾನ್' ಯೋಜನೆಗಾಗಿ ಶರಣಬಸವ ವಿಶ್ವವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಿದ ಮೂರು ಯೋಜನೆ-ಆವಿಷ್ಕಾರಗಳು ಆಯ್ಕೆಯಾಗಿವೆ.
ಐಐಟಿ, ಐಐಎಂ ಹಾಗೂ ಇನ್ನಿತರ ವಿಶ್ವವಿದ್ಯಾಲಯ, ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಕೇಂದ್ರಗಳ ವಿದ್ಯಾರ್ಥಿಗಳು ಸಲ್ಲಿಸಿದ ಒಟ್ಟು 2500ಕ್ಕೂ ಹೆಚ್ಚು ಯೋಜನೆಗಳು ಮತ್ತು ಆವಿಷ್ಕಾರಗಳಲ್ಲಿ ಮುಂದಿನ ಸುತ್ತಿಗೆ 200 ಅತ್ಯುತ್ತಮ ಯೋಜನೆಗಳನ್ನು ಆಯ್ಕೆ ಮಾಡಲಾಗಿದೆ.
ಇವುಗಳಲ್ಲಿ ಶರಣಬಸವ ವಿವಿಯ ಮೂರು ಯೋಜನೆಗಳು ಇರುವುದು ಶ್ಲಾಘನೀಯವಾಗಿದೆ. ಐಐಟಿ, ಐಐಎಂ, ಎನ್‍ಐಟಿ, ಕೇಂದ್ರೀಯ ವಿಶ್ವವಿದ್ಯಾಲಯ, ಖಾಸಗಿ ವೃತ್ತಿಪರರು ಸೇರಿದಂತೆ ಹೆಸರಾಂತ ಉನ್ನತ ಶಿಕ್ಷಣ ಕೇಂದ್ರಗಳ ವಿದ್ಯಾರ್ಥಿಗಳು, ನಾವಿನ್ಯಕಾರರು, ಶಿಕ್ಷಕರು, ಶಿಕ್ಷಣತಜ್ಞರು ಇದರಲ್ಲಿ ಭಾಗವಹಿಸಿದ್ದಾರೆ. ತಾತ್ಕಾಲಿಕ ಪಟ್ಟಿಯಲ್ಲಿ ಗುರುತಿಸಿದ ತಂಡಗಳು ಮುಂದಿನ ಹಂತದಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮಿಗಳನ್ನು ತಾಂತ್ರಿಕ ಸುಧಾರಿತ ಪರಿಹಾರಗಳ ಕಾರ್ಯಸೂಚಿ ಪ್ರಸ್ತುತಪಡಿಸಲು ಆಹ್ವಾನಿಸಲಾಗುತ್ತದೆ.
ಶರಣಬಸವ ವಿಶ್ವವಿದ್ಯಾಲಯದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗದ ಡೀನ್ ಪ್ರೊ. ಕಿರಣ ಮಾಕಾ, ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ ಜವಳಗಿ ಮತ್ತು ತಂಡ, ಸಹಾಯಕ ಪ್ರಾಧ್ಯಾಪಕ ಕೈಲಾಸ ಪಾಟೀಲ, ಪ್ರೊ.ಸಂಜೀವ್ ಕುಮಾರ ಜೀವಣಗಿ, ಪ್ರೊ.ರೇಖಾ ಪಾಟೀಲ ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿ ಗುಂಡೇರಾವ್ ಕುಲಕರ್ಣಿ, ಪ್ರೊ.ಮಯೂರ ಕೋಟಿ ಹಾಗೂ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಪ್ರೊ.ಬಸವರಾಜ ಮಮ್ಮಣಿ ಅವರು ಸಲ್ಲಿಸಿದ ನೂತನ ಯೋಜನೆಗಳು ಮುಂದಿನ ಸುತ್ತಿನ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.







