ಮುಸ್ಲಿಮರಿಗೆ ನಿರಂತರ ಕಿರುಕುಳದ ಬಗ್ಗೆ ಆತಂಕ: 101 ಮಾಜಿ ಸರಕಾರಿ ಅಧಿಕಾರಿಗಳಿಂದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಎ.23: ಕೊರೋನ ವೈರಸ್ ವಿರುದ್ಧ ಭಾರತವು ಹೋರಾಡುತ್ತಿರುವ ಸಂದರ್ಭದಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿರುವ ಕಿರುಕುಳಗಳ ಕುರಿತು ದೇಶಾದ್ಯಂತದ 101 ಮಾಜಿ ಸರಕಾರಿ ಅಧಿಕಾರಿಗಳು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನಂಟ್ ಗವರ್ನರ್ಗಳಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್ ಹೆಸರಿನಲ್ಲಿ ಒಂದುಗೂಡಿರುವ ಮಾಜಿ ಅಖಿಲ ಭಾರತ ಮತ್ತು ಕೇಂದ್ರೀಯ ಸೇವೆಗಳ ಅಧಿಕಾರಿಗಳು ತಬ್ಲೀಗಿ ಜಮಾಅತ್ನ ಸಮಾವೇಶದ ಸುದ್ದಿಯು ಭಾರತದಾದ್ಯಂತ ಹರಡಿದಾಗಿನಿಂದ ಮುಸ್ಲಿಮ್ ಸಮುದಾಯದ ವಿರುದ್ಧ ಕಂಡು ಬರುತ್ತಿರುವ ದ್ವೇಷ ಭಾವನೆಯ ವಿರುದ್ಧ ಈ ಪತ್ರವನ್ನು ಬರೆದಿದ್ದಾರೆ.
ಈಗಾಗಲೇ ಕೋಮು ಉದ್ವಿಗ್ನತೆಯಿಂದ ಕೂಡಿದ್ದ ವಾತಾವರಣವನ್ನು ಇನ್ನಷ್ಟು ಹದಗೆಡಿಸುವಲ್ಲಿ ಮಾಧ್ಯಮ ವರ್ಗಗಳ ಪಾತ್ರವನ್ನು ಗುರುತಿಸಿರುವ ಪತ್ರವು,ದಿಲ್ಲಿ ಸರಕಾರದ ಸಲಹೆಯನ್ನು ಕಡೆಗಣಿಸಿ ಸಮಾವೇಶವನ್ನು ನಡೆಸಿದ ಜಮಾಅತ್ನ ಕ್ರಮವು ಅನುಚಿತ ಮತ್ತು ಖಂಡನೀಯ ಎನ್ನ್ನುವುದು ಪ್ರಶ್ನಾತೀತವಾಗಿದೆ. ಆದರೆ ಅದಕ್ಕೆ ಕೋಮುಬಣ್ಣವನ್ನು ನೀಡಿದ ಮತ್ತು ಇಡೀ ಮುಸ್ಲಿಮ್ ಸಮುದಾಯಕ್ಕೆ ಅದನ್ನು ವಿಸ್ತರಿಸಿದ ಮಾಧ್ಯಮಗಳ ಕ್ರಮವು ಅತ್ಯಂತ ಹೊಣೆಗೇಡಿತನದ್ದು ಮತ್ತು ಖಂಡನೀಯವಾಗಿದೆ ಎಂದು ಹೇಳಿದೆ.
ಅಲ್ಪಸಂಖ್ಯಾತ ಸಮುದಾಯದ ಕಳವಳಗಳನ್ನು ನಿವಾರಿಸಲು ಮತ್ತು ಲಾಕ್ಡೌನ್ ಅವಧಿಯಲ್ಲಿ ಅವರ ದೈನಂದಿನ ಅಗತ್ಯಗಳನ್ನು ಪೂರೈಸಲು ರಾಜ್ಯ ಸರಕಾರಗಳು ಅನುಸರಿಸಬಹುದಾದ ಕೆಲವು ಕ್ರಮಗಳನ್ನೂ ಪತ್ರದಲ್ಲಿ ಸೂಚಿಸಲಾಗಿದೆ.
ಮುಸ್ಲಿಮರ ನಿಂದನೆ, ಅವರ ಮೇಲೆ ಹಲ್ಲೆಗಳ ಹಲವಾರು ನಿದರ್ಶನಗಳನ್ನು ಉಲ್ಲೇಖಿಸಿರುವ ಪತ್ರವು,ಅವರ ಸುರಕ್ಷತೆಯನ್ನು ಖಚಿತಪಡಿಸುವಂತೆ ರಾಜ್ಯ ಸರಕಾರಗಳಿಗೆ ಕರೆ ನೀಡಿದೆ.