33% ಕೆಳಶ್ರೇಣಿಯ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಣೆ: ಇಲಾಖೆಗಳಿಗೆ ಕೇಂದ್ರ ಸರಕಾರದ ಸೂಚನೆ
ಹೊಸದಿಲ್ಲಿ, ಎ.23: ಮೂರನೇ ಒಂದು ಭಾಗದಷ್ಟು ಕೆಳಶ್ರೇಣಿಯ ಸಿಬ್ಬಂದಿಗಳೊಂದಿಗೆ, ಗುಂಪು ಸೇರಲು ಆಸ್ಪದ ನೀಡದೆ ಮತ್ತು ಸುರಕ್ಷಿತ ಅಂತರ ನಿಯಮ ಪಾಲಿಸಿ ಕಾರ್ಯನಿರ್ವಹಿಸುವಂತೆ ಕೇಂದ್ರ ಸರಕಾರ ಎಲ್ಲಾ ಇಲಾಖೆಗಳಿಗೂ ಸೂಚನೆ ನೀಡಿದೆ.
ಕೆಲವು ಸಚಿವಾಲಯ ಮತ್ತು ಕಚೇರಿಗಳಲ್ಲಿ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಸಿಬ್ಬಂದಿಗಳಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂಬ ವರದಿ ಹಿನ್ನೆಲೆಯಲ್ಲಿ, ಸಿಬ್ಬಂದಿ ಸಚಿವಾಲಯ ನೀಡಿದ ಆದೇಶದಲ್ಲಿ, ಎಲ್ಲಾ ಇಲಾಖೆಗಳೂ ಉಪಕಾರ್ಯದರ್ಶಿ ಹಂತಕ್ಕಿಂತ ಕೆಳಶ್ರೇಣಿಯ ಸಿಬಂದಿಗಳಲ್ಲಿ ಮೂರನೇ ಒಂದು ಭಾಗದಷ್ಟು ಸಿಬ್ಬಂದಿಗಳೊಂದಿಗೆ ಮಾತ್ರ ಕಾರ್ಯ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಗೃಹ ಇಲಾಖೆ ಎಪ್ರಿಲ್ 15ರಂದು ಹೊರಡಿಸಿದ್ದ ಪರಿಷ್ಕೃತ ಮಾರ್ಗದರ್ಶಿ ಸೂಚನೆಯಲ್ಲಿ, ಉಪ ಕಾರ್ಯದರ್ಶಿ ಮತ್ತು ಅದಕ್ಕಿಂತ ಉನ್ನತ ಶ್ರೇಣಿಯ ಅಧಿಕಾರಿಗಳ ಕಚೇರಿಯಲ್ಲಿ 100% ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು ಮತ್ತು ಉಳಿದ ಕಚೇರಿಗಳು 33% ಸಿಬಂದಿಗಳೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಲಾಗಿತ್ತು. ಕಚೇರಿಯಲ್ಲಿ ಜನರು ಗುಂಪುಗೂಡುವುದನ್ನು ತಪ್ಪಿಸಲು ಮತ್ತು ಸುರಕ್ಷಿತ ಅಂತರ ಮಾನದಂಡವನ್ನು ಪಾಲಿಸಲು ಈ ಸೂಚನೆ ನೀಡಲಾಗಿದೆ. ಅಲ್ಲದೆ ಸಿಬ್ಬಂದಿಗಳು ಬೇರೆ ಬೇರೆ ಸಮಯದಲ್ಲಿ ಕಾರ್ಯನಿರ್ವಹಿಸುವಂತೆ ಇಲಾಖೆಯ ಮುಖ್ಯಸ್ಥರು ಸೂಚಿಸಬಹುದು ಎಂದು ಸಿಬ್ಬಂದಿ ಸಚಿವಾಲಯ ತಿಳಿಸಿದೆ.
ಸಿಬ್ಬಂದಿ ಸಚಿವಾಲಯ ಸರಕಾರಿ ಕಚೇರಿಗಳಿಗೆ 3 ನಿರ್ಧರಿತ ಸಮಯದ ಆಯ್ಕೆಯನ್ನು ನೀಡಿದೆ. ಬೆಳಿಗ್ಗೆ 9ರಿಂದ ಸಂಜೆ 5:30ರವರೆಗೆ, ಬೆಳಿಗ್ಗೆ 9:30ರಿಂದ ಸಂಜೆ 6ರವರೆಗೆ, ಬೆಳಿಗ್ಗೆ 10ರಿಂದ ಸಂಜೆ 6:30ರವರೆಗೆ. ಇದರಲ್ಲಿ ಸೂಕ್ತವಾದ ಸಮಯವನ್ನು ಇಲಾಖೆಯ ಮುಖ್ಯಸ್ಥರು ಅನುಸರಿಸಬಹುದು ಎಂದು ಸಚಿವಾಲಯ ತಿಳಿಸಿದೆ.







