ಸ್ಪಾನಿಶ್ ಫ್ಲೂಗೆ ಅವಳಿ ಸಹೋದರಿ ಬಲಿಯಾಗಿ 100 ವರ್ಷಗಳ ಬಳಿಕ ಕೊರೋನ ವೈರಸ್ ಗೆ ಶತಾಯುಷಿ ಬಲಿ
ನ್ಯೂಯಾರ್ಕ್: ಎರಡನೇ ಜಾಗತಿಕ ಮಹಾ ಯುದ್ಧದಲ್ಲಿ ಭಾಗಿಯಾಗಿದ್ದ ಶತಾಯುಷಿ ಫಿಲಿಪ್ ಕಹ್ನ್ ಅವರು ಕೊರೋನವೈರಸ್ಗೆ ಬಲಿಯಾಗಿದ್ದಾರೆ. ಸರಿಯಾಗಿ ಒಂದು ಶತಮಾನದ ಹಿಂದೆ 1919ರಲ್ಲಿ ಅವರ ಅವಳಿ ಸಹೋದರ ಸ್ಪಾನಿಶ್ ಫ್ಲೂಗೆ ಬಲಿಯಾಗಿದ್ದರು.
ಫಿಲಿಪ್ ಅವರು ಐವೊ ಜಿಮಾ ಯುದ್ಧದಲ್ಲಿ ಪಾಲ್ಗೊಂಡಿದ್ದರಲ್ಲದೆ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಅಣುಬಾಂಬ್ ದಾಳಿಯ ನಂತರದ ವೈಮಾನಿಕ ಸಮೀಕ್ಷೆಗಳಲ್ಲಿ ಪಾಲ್ಗೊಂಡಿದ್ದರು.
ಕಹ್ನ್ ಮತ್ತವರ ಅವಳಿ ಸೋದರ ಸ್ಯಾಮುವೆಲ್ ಡಿಸೆಂಬರ್ 1919ರಲ್ಲಿ ಜನಿಸಿದ್ದರು. ಆದರೆ ಅವರ ಅವಳಿ ಸೋದರ ಹೆಚ್ಚು ದಿನ ಬದುಕದೆ ಸ್ಪಾನಿಶ್ ಫ್ಲೂಗೆ ಬಲಿಯಾಗಿದ್ದರು.
ತಮ್ಮ ಜೀವಿತಾವಧಿಯಲ್ಲಿ ಇನ್ನೊಂದು ಸಾಂಕ್ರಾಮಿಕ ರೋಗ ತಟ್ಟಬಹುದೆಂಬ ಭಯ ಕಹ್ನ್ ಅವರಲ್ಲಿ ಯಾವತ್ತೂ ಇತ್ತು ಎಂದು ಅವರ ಮೊಮ್ಮಗ ವಾರೆನ್ ಝೈಸ್ಮನ್ ಹೇಳಿದ್ದಾರೆ. “ಇತಿಹಾಸ ಮರುಕಳಿಸುತ್ತದೆ. ನೂರು ವರ್ಷ ಅಷ್ಟೊಂದು ದೊಡ್ಡ ಸಮಯವೇನಲ್ಲ'' ಎಂದು ಅವರು ಆಗಾಗ ಹೇಳುತ್ತಿದ್ದರು ಎಂದೂ ವಾರೆನ್ ನೆನಪಿಸಿಕೊಂಡಿದ್ದಾರೆ.
ಕಹ್ನ್ ಅವರು ಅಮೆರಿಕಾದ ಸೇನಾ ಪಡೆಯ ಪೈಲಟ್ ತರಬೇತಿ ಕಾರ್ಯಕ್ರಮದಲ್ಲಿ 1940ರಲ್ಲಿ ಸೇರಿದ್ದರು. ಪೆಸಿಫಿಕ್ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ್ದ ಅವರಿಗೆ ಎರಡು ಕಂಚಿನ ಸ್ಟಾರ್ ದೊರಕಿತ್ತು.