ಕಾಪು ವೃತ್ತದಲ್ಲಿ ಡ್ರೋನ್ ನಿಂದ ತಪಾಸಣೆ

ಪಡುಬಿದ್ರಿ: ಉಡುಪಿ ಪೋಲಿಸ್ ವರಿಷ್ಠಾಧಿಕಾರಿಯವರ ಆದೇಶದಂತೆ ಕಾಪು ವೃತ್ತದ ಕಾಪು, ಪಡುಬಿದ್ರಿ ಮತ್ತು ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಬೆಳಿಗ್ಗೆ 11ಗಂಟೆಯ ನಂತರ ಅಂಗಡಿ ಮುಗ್ಗಟ್ಟು ಮತ್ತು ವಿನಾಕರಣ ಸಂಚರಿಸುವವರ ವಿವರಗಳನ್ನು ಡ್ರೋನ್ ಕೆಮರಾದಲ್ಲಿ ಸೆರೆ ಹಿಡಿಯಲಾಯಿತು.
ಡ್ರೋನ್ ಕ್ಯಾಮರಾ ಮೂಲಕ ತಪಾಸಣೆ ಕಾರ್ಯಕ್ಕಾಗಿ ಪೊಲೀಸ್ ಇಲಾಖೆ ಕಾಪುವಿನ ಛಾಯಾ ಗ್ರಾಹಕರೊಬ್ಬರನ್ನು ಗೊತ್ತುಪಡಿಸಿದೆ. ಅವರು ಪೊಲೀಸರೊಂದಿಗೆ ಗುರುವಾರದಿಂದ ಜಿಲ್ಲೆಯಾದ್ಯಂತ ತಪಾಸಣೆ ಕಾರ್ಯ ಆರಂಭಿಸಿದ್ದಾರೆ. ಶುಕ್ರವಾರ ಪಡುಬಿದ್ರಿ ಹಾಗೂ ಹೆಜಮಾಡಿ ಪೇಟೆಎ ಹಾಗೂ ಉಡುಪಿ ಜಿಲ್ಲೆಯ ಗಡಿ ಪ್ರದೇಶದ ತಪಾಸಣಾ ಕೇಂದ್ರದ ಬಳಿ ಡ್ರೋಣ್ ಹಾರಾಟದ ಮೂಲಕ ತಪಾಸಣೆ ನಡೆಸಲಾಯಿತು.
ಡ್ರೋನ್ ಗೆ ಹಾನಿ: ಹೆಜಮಾಡಿಯಲ್ಲಿ ಡ್ರೋನ್ ಕ್ಯಾಮರಾ ಮೂಲಕ ತಪಾಸಣೆ ಮಾಡುತ್ತಿದ್ದಾಗ ಕ್ಯಾಮರಾ ವಿದ್ಯುತ್ ತಂತಿಗೆ ಅಪ್ಪಳಿಸಿ ನೆಲಕ್ಕುರುಳಿ ಹಾನಿಯಾಗಿದೆ. ತಕ್ಷಣ ಬದಲಿ ಕ್ಯಾಮರಾ ಬಳಸಿ ತಪಾಸಣೆ ಮುಂದುವರಿಸಲಾಯಿತು. ಶುಕ್ರವಾರ ಕ್ಯಾಮರಾ ಅವಘಡದಿಂದ ಛಾಯಾಗ್ರಾಹಕರಿಗೆ ಸುಮಾರು 25 ಸಾವಿರ ನಷ್ಟ ಉಂಟಾಗಿದೆ.
ಲಾಕ್‍ಡೌನ್ ಸಡಿಲಿಕೆಯ ಘೋಷಣೆಯ ಸರ್ಕಾರದ ಮಾರ್ಗಸೂಚಿಯನ್ನು ತಿಳಿದಿದ್ದ ವ್ಯಾಪಾರಸ್ಥರು ಪಡುಬಿದ್ರಿ, ಕಾಪು ಭಾಗದಲ್ಲಿ ಹಾರ್ಡ್‍ವೇರ್, ಸಿಮೆಂಟ್, ಎಲೆಕ್ಟ್ರಿಕಲ್, ಪೇಂಟ್, ಫ್ಯಾನ್ಸಿ ಮಳಿಗೆಗಳನ್ನು ತೆರೆದಿದ್ದರು. ಇದನ್ನು ಮನಗಂಡ ಪೊಲೀಸರು ತಪಾಸಣೆ ನಡೆಸಿ ಅಂತಹ ಮಳಿಗೆಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದರು.







