ಬಿಸಿಲಿನಲ್ಲಿ ಕೊರೋನ ವೈರಸ್ ನಾಶ: ಅಮೆರಿಕದ ವಿಜ್ಞಾನಿಗಳ ಸಂಶೋಧನೆ

ವಾಶಿಂಗ್ಟನ್, ಎ. 24: ನೂತನ-ಕೊರೋನವೈರಸ್ ಬಿಸಿಲಿನಲ್ಲಿ ಬೇಗನೆ ನಾಶಹೊಂದುತ್ತದೆ ಎಂಬುದಾಗಿ ಹೊಸ ಸಂಶೋಧನೆಯೊಂದು ತಿಳಿಸಿದೆ ಎಂದು ಅಮೆರಿಕದ ಆಂತರಿಕ ಭದ್ರತೆ ಕಾರ್ಯದರ್ಶಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹೆಗಾರ ವಿಲಿಯಮ್ ಬ್ರಯಾನ್ ಗುರುವಾರ ಘೋಷಿಸಿದ್ದಾರೆ.
ಆದರೆ, ಈ ಅಧ್ಯಯನವನ್ನು ಬಹಿರಂಗಪಡಿಸಲಾಗಿಲ್ಲ ಹಾಗೂ ಅದು ಬಾಹ್ಯ ಮೌಲ್ಯಮಾಪನಕ್ಕಾಗಿ ಕಾಯುತ್ತಿದೆ.
ಸೂರ್ಯನ ಬಿಸಿಲಿನಲ್ಲಿರುವ ಅತಿನೇರಳೆ ಕಿರಣಗಳು ವೈರಾಣುವಿನ ಮೇಲೆ ವಿನಾಶಕ ಪರಿಣಾಮವನ್ನು ಹೊಂದಿದೆ ಎಂಬುದನ್ನು ಸರಕಾರದ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಯಾನ್ ಹೇಳಿದರು. ಹಾಗಾಗಿ, ಬೇಸಿಗೆಯಲ್ಲಿ ರೋಗದ ತೀವ್ರತೆಯು ಕಡಿಮೆಯಾಗಬಹುದು ಎಂಬ ಭರವಸೆಯನ್ನು ಈ ಅಧ್ಯಯನವು ಹುಟ್ಟುಹಾಕಿದೆ ಎಂದರು.
‘‘ವಸ್ತುಗಳ ಮೇಲಿರುವ ಹಾಗೂ ಗಾಳಿಯಲ್ಲಿರುವ ಕೊರೋನ ವೈರಸ್‌ಗಳನ್ನು ಕೊಲ್ಲುವ ಸಾಮರ್ಥ್ಯ ಸೂರ್ಯನ ಬೆಳಕಿಗೆ ಇರುವುದು ನಮ್ಮ ಈವರೆಗಿನ ಪ್ರಬಲ ಸಂಶೋಧನೆಯಾಗಿದೆ’’ ಎಂದು ವಿಲಿಯಮ್ ಬ್ರಯಾನ್ ನುಡಿದರು.
‘‘ಉಷ್ಣತೆ ಮತ್ತು ತೇವಾಂಶಕ್ಕೆ ಸಂಬಂಧಿಸಿಯೂ ನಾವು ಇಂಥದೇ ಪರಿಣಾಮವನ್ನು ನೋಡಿದ್ದೇವೆ. ಉಷ್ಣತೆಯನ್ನು ಅಥವಾ ತೇವಾಂಶವನ್ನು ಹೆಚ್ಚಿಸಿದರೆ ಅಥವಾ ಎರಡನ್ನೂ ಹೆಚ್ಚಿಸಿದರೆ, ಅದು ಸಾಮಾನ್ಯವಾಗಿ ವೈರಸ್‌ಗೆ ಮಾರಕವಾಗುತ್ತದೆ’’ ಎಂದರು.





