ಪ್ರಾಯೋಗಿಕ ಕೋವಿಡ್-19 ಔಷಧ ಕ್ಲಿನಿಕಲ್ ಪರೀಕ್ಷೆಯಲ್ಲಿ ವಿಫಲ
ನ್ಯೂಯಾರ್ಕ್, ಎ. 24: ಪ್ರಾಯೋಗಿಕ ಕೊರೋನ ವೈರಸ್ ಚಿಕಿತ್ಸೆಯು ತನ್ನ ಮೊದಲ ಕ್ಲಿನಿಕಲ್ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂದು ಗುರುವಾರ ಆಕಸ್ಮಿಕವಾಗಿ ಬಿಡುಗಡೆಯಾಗಿರುವ ಪರೀಕ್ಷಾ ಫಲಿತಾಂಶವು ತಿಳಿಸಿದೆ. ಭಾರೀ ನಿರೀಕ್ಷೆಯಿದ್ದ ಔಷಧಿಯು ವಿಫಲವಾಗಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಸಮುದಾಯವು ನಿರಾಶೆಗೊಳಗಾಗಿದೆ.
ಫಲಿತಾಂಶದ ಕರಡು ವರದಿಯು ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಸ್ವಲ್ಪ ಸಮಯ ಪತ್ತೆಯಾಯಿತು ಹಾಗೂ ಅದನ್ನು ‘ಫೈನಾನ್ಶಿಯಲ್ ಟೈಮ್ಸ್’ ಮತ್ತು ‘ಸ್ಟಾಟ್’ ಮೊದಲು ವರದಿ ಮಾಡಿದವು ಹಾಗೂ ಫಲಿತಾಂಶದ ಸ್ಕ್ರೀನ್‌ಶಾಟನ್ನು ಪ್ರಸಾರಿಸಿದವು.
ಆದರೆ, ಈಗ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿರುವ ಸಂದೇಶವು ಫಲಿತಾಂಶವನ್ನು ವರದಿ ಮಾಡಿದೆ ಎನ್ನುವುದನ್ನು ಔಷಧ ತಯಾರಿಕೆಯಲ್ಲಿ ತೊಡಗಿರುವ ಕಂಪೆನಿ ಗಿಲಿಯಡ್ ಸಯನ್ಸಸ್ ತಳ್ಳಿಹಾಕಿದೆ ಹಾಗೂ ‘ಸಂಭಾವ್ಯ ಪ್ರಯೋಜನ’ವನ್ನು ಅದು ತೋರಿಸಿದೆ ಎಂದಿದೆ.
ಚೀನಾದಲ್ಲಿ ಮಾಡಲಾಗಿರುವ ಪರೀಕ್ಷೆಯಲ್ಲಿ 237 ರೋಗಿಗಳನ್ನು ಬಳಸಿಕೊಳ್ಳಲಾಯಿತು. ಆ ಪೈಕಿ 158 ಮಂದಿಗೆ ಔಷಧ ನೀಡಿದರೆ, 79 ಮಂದಿಯನ್ನು ನಿಯಂತ್ರಣ ವ್ಯವಸ್ಥೆಯಲ್ಲಿ ಇಡಲಾಯಿತು. ಅಡ್ಡ ಪರಿಣಾಮಗಳ ಹಿನ್ನೆಲೆಯಲ್ಲಿ, 18 ರೋಗಿಗಳಿಗೆ ‘ರೆಮ್‌ಡೆಸಿವಿರ್’ ಔಷಧಿಯನ್ನು ನೀಡುವುದನ್ನು ಶೀಘ್ರವೇ ನಿಲ್ಲಿಸಲಾಯಿತು ಎಂದು ಪರೀಕ್ಷಾ ಫಲಿತಾಂಶ ತಿಳಿಸಿದೆ.







